ಉದಯವಾಹಿನಿ, ಕಲಬುರಗಿ: ಮಹಾರಾಷ್ಟ್ರದಲ್ಲಿ ಧಾರಾಕಾರ ಮಳೆ ಹಿನ್ನೆಲೆ ಉಜ್ಜನಿ ಜಲಾಶಯದಿಂದ ಭೀಮಾ ನದಿಗೆ 2.80 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ ಮಾಡಿದ್ದು, ಭೀಮಾ ತೀರದಲ್ಲಿ ಪ್ರವಾಹ ಆತಂಕ ಮನೆಮಾಡಿದೆ.
ಭೀಮಾನದಿಗೆ ಅಪಾರ ಪ್ರಮಾಣದ ನೀರು ಬಿಡುಗಡೆ ಪರಿಣಾಮ ಅಫಜಲಪುರ, ಜೇವರ್ಗಿ ತಾಲೂಕಿನ ಅನೇಕ ಗ್ರಾಮಗಳಿಗೆ ಪ್ರವಾಹದ ಆತಂಕ ಎದುರಾಗಿದೆ. ಭೀಮಾತೀರದಲ್ಲಿ ಜಿಲ್ಲಾಡಳಿತ ತೀವ್ರ ಕಟ್ಟೆಚರ ವಹಿಸಿದೆ. ಕ್ಷಣದಿಂದ ಕ್ಷಣಕ್ಕೆ ಭೀಮಾ ನದಿ ಒಳಹರಿವು ಹೆಚ್ಚುತ್ತಿದ್ದು, ನದಿ ತೀರಕ್ಕೆ ಯಾರು ತೆರಳದಂತೆ ಮೈಕ್ ಮೂಲಕ ಡಂಗೂರ ಸಾರಲಾಗಿದೆ. ಸೊನ್ನ ಗ್ರಾಮದಲ್ಲಿ ಎಚ್ಚರಿಕೆ ವಹಿಸುವಂತೆ ಅಧಿಕಾರಿಗಳು ಡಂಗೂರ ಸಾರಿದ್ದಾರೆ.
ಉಜ್ಜನಿ ಜಲಾಶಯದಿಂದ ಭೀಮಾ ನದಿಗೆ 2 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿತ್ತು. ಸೊನ್ನ ಬ್ಯಾರೇಜ್‌ನಿಂದ ಸಹ ಭೀಮಾ ನದಿಗೆ 1.60 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ ಮಾಡಿದ ಪರಿಣಾಮ ದೇವಲ ಗಾಣಗಾಪುರ, ಘತ್ತರಗಿ ಸೇತುವೆ ಹಾಗೂ ಮಣ್ಣೂರ ಗ್ರಾಮದ ಯಲ್ಲಮ್ಮ ದೇವಿ ದೇವಸ್ಥಾನ ಮುಳುಗಡೆಯಾಗಿದೆ.
