ಉದಯವಾಹಿನಿ, ಚಿತ್ರದುರ್ಗ: ಇತ್ತೀಚಿಗೆ ಸುರಿದ ಅಕಾಲಿಕ ಮಳೆ ಹಾಗು ಬೆಲೆ ಕುಸಿತದಿಂದಾಗಿ ಈರುಳ್ಳಿಯನ್ನು ಕೇಳುವವರಿಲ್ಲದಂತಾಗಿದೆ. ಹೀಗಾಗಿ ಆಕ್ರೋಶಗೊಂಡ ರೈತರು ಈರುಳ್ಳಿಯನ್ನು ಡಿಸಿ ಕಚೇರಿ ಆವರಣದಲ್ಲಿ ಸುರಿದು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿರುವ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ, ಮೊಳಕಾಲ್ಮೂರು ಸೇರಿದಂತೆ ಹಿರಿಯೂರು ತಾಲೂಕುಗಳ ರೈತರ ಪ್ರಮುಖ ವಾಣಿಜ್ಯ ಬೆಳೆ ಈರುಳ್ಳಿ. ಹೀಗಾಗಿ ಈ ಭಾಗದ ಈರುಳ್ಳಿಗೆ ಎಲ್ಲಡೆ ಭಾರೀ ಬೇಡಿಕೆ ಇದೆ. ಅಲ್ಲದೇ ಮಧ್ಯ ಕರ್ನಾಟಕದ ಸೇಬಿನಾಕಾರದ ಈರುಳ್ಳಿ ಎಂಬ ಖ್ಯಾತಿ ಪಡೆದಿರುವ ಈರುಳ್ಳಿಯು ರೈತರ ಪಾಲಿಗೆ ಬಂಗಾರದಂತ ಲಾಭ ಕೊಡುವ ಬೆಳೆ ಎನಿಸಿದೆ. ಆದರೆ ಇತ್ತೀಚಿಗೆ ಸುರಿದ ಅಕಾಲಿಕ ಮಳೆಯಿಂದಾಗಿ ಕೆಲವೆಡೆ ಈರುಳ್ಳಿ ಕೊಳೆತು ಹೋಗಿದ್ದು, ಹಲವಡೆ ಉತ್ತಮ ಇಳುವರಿ ಬಂದಿದೆ. ಆದರೆ ಮಾರುಕಟ್ಟೆಯಲ್ಲಿ ಮಾತ್ರ ಈರುಳ್ಳಿ ಬೆಲೆ ನೆಲಕ್ಕೆ ಕುಸಿದಿದೆ. ಹೀಗಾಗಿ ಒಂದು ಕೆಜಿ ಈರುಳ್ಳಿ ಕೇವಲ 2 ರೂಪಾಯಿಯಿಂದ 3 ರೂಪಾಯಿಗೆ ಮಾತ್ರ ಸೇಲ್ ಆಗುತ್ತಿದೆ. ಹೀಗಾಗಿ ಸಾಲ ಮಾಡಿ ಈರುಳ್ಳಿ ಬೆಳೆದ ರೈತರು, ಸೂಕ್ತ ಬೆಲೆ ಸಿಗದೇ ಕಂಗಾಲಾಗಿದ್ದಾರೆ.
ರೈತರ ನಿರೀಕ್ಷಯಂತೆ, ಉತ್ತಮ ಬೆಳೆ ಬಂದರೂ ಸಹ ಲಾಭ ಸಿಗಲಾರದೇ ರೈತರು ದಿಕ್ಕು ತೋಚದಂತಾಗಿದ್ದಾರೆ. ಹೀಗಾಗಿ ರೈತರು ಬೆಳೆದಿರೋ ಈರುಳ್ಳಿಗೆ ಸರ್ಕಾರ ಕೂಡಲೇ ವೈಜ್ಞಾನಿಕವಾಗಿ ಬೆಂಬಲ ಬೆಲೆ ನಿಗದಿ ಪಡಿಸಬೇಕು. ಸರ್ಕಾರ ಕೂಡಲೇ ಸೂಕ್ತ ಪರಿಹಾರ ಒದಗಿಸುವ ಮೂಲಕ ಅನ್ನದಾತರನ್ನು ಸಂಕಷ್ಟದಿಂದ ಪಾರು ಮಾಡಬೇಕು. ಇಲ್ಲವಾದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದ್ದಾರೆ.
