ಉದಯವಾಹಿನಿ, ಆಗ್ರಾ: ಉತ್ತರ ಪ್ರದೇಶದ ಆಗ್ರಾದಲ್ಲಿ 22 ವರ್ಷದ ಮಹಿಳೆಯೊಬ್ಬಳಿಗೆ ಶಾಲಾ ಶಿಕ್ಷಕ ಶ್ಯಾಮ್‌ವೀರ್ ಸಿಂಗ್ ದೌರ್ಜನ್ಯ ನಡೆಸಿದ ಘಟನೆ ನಡೆದಿದೆ. ಆರೋಪಿ ಮಹಿಳೆಯನ್ನು ಕಾರಿನೊಳಗೆ ಬಲವಂತವಾಗಿ ಎಳೆಯಲು ಯತ್ನಿಸಿ, ಗನ್ ( ತೋರಿಸಿ ಹೆದರಿಸಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಜಗ್ದೀಶ್‌ಪುರದ ಮಹಿಳೆ ಕಾರ್ಗಿಲ್ ಸ್ಕ್ವೇರ್ ಬಳಿಯ ಮೂನ್‌ಲೈಟ್ ಹೋಟೆಲ್ ಎದುರು ಸ್ಕೂಟರ್ ನಿಲ್ಲಿಸಿ ನೀರು ಕುಡಿಯುತ್ತಿದ್ದಳು. ಆಗ ಶ್ಯಾಮ್‌ವೀರ್ ಸಿಂಗ್ ಮತ್ತು ಇನ್ನೊಬ್ಬನು ಕಾರಿನಲ್ಲಿ ಬಂದು, 5,000 ರೂ. ಕೊಡುವುದಾಗಿ ಹೇಳಿ ಕಾರಿನೊಳಗೆ ಬರಲು ಕೇಳಿದರು. ಮಹಿಳೆ ತಿರಸ್ಕರಿಸಿದಾಗ, ಶ್ಯಾಮ್‌ವೀರ್ ಕಾರಿನಿಂದ ಇಳಿದು, “ನೀನ್ನನ್ನೇ ಕರೆಯುತ್ತಿದ್ದೇನೆ” ಎಂದು ಕೈಹಿಡಿದು ಎಳೆಯಲು ಯತ್ನಿಸಿದ. ಮಹಿಳೆ ವಿರೋಧಿಸಿ ಚೀರಿದಳು. ಜನರು ಸೇರಿದಾಗ ಆರೋಪಿ ಗನ್ ತೋರಿಸಿ ಹೆದರಿಸಿದ್ದಾನೆ. ಒಬ್ಬ ವ್ಯಕ್ತಿ ಮುಂದೆ ಬಂದಾಗ ಅವನಿಗೂ ಬಂದೂಕು ತೋರಿಸಿದ. ಮಹಿಳೆ ಆರೋಪಿಯ ಕಾರ್ ಕೀ ಕಿತ್ತುಕೊಂಡಳು. ಆದರೂ ಶ್ಯಾಮ್‌ವೀರ್ ತಪ್ಪಿಸಿಕೊಂಡು, ಮಹಿಳೆಯ ಮೇಲೆ ಕಾರು ಹತ್ತಿಸಲು ಯತ್ನಿಸಿದ್ದಾನೆ.
ಎರಡು ವಿಡಿಯೋಗಳು ಆನ್‌ಲೈನ್‌ನಲ್ಲಿ ಹರಡಿವೆ. ಒಂದರಲ್ಲಿ ಮಹಿಳೆ, “ಈತ ನನ್ನನ್ನು ಪೀಡಿಸುತ್ತಿದ್ದಾರ, 5000 ರೂ. ಕೊಡುತ್ತೇನೆ ಬಾ ಎಂದು ಒತ್ತಾಯಿಸಿ ಬಂದೂಕು ತೋರಿಸಿದ” ಎಂದು ಹೇಳುತ್ತಾಳೆ. ಇನ್ನೊಂದರಲ್ಲಿ ಆರೋಪಿ ಅವಳ ಕೈ ಹಿಡಿದು ಎಳೆಯುತ್ತಿದ್ದು, ಜನರು “ಕೈಬಿಡು, ದೂರ ಇರಿ” ಎಂದು ಕೂಗುತ್ತಾರೆ.
