ಉದಯವಾಹಿನಿ, ಮಡಿಕೇರಿ: ರಾಜ್ಯಾದ್ಯಂತ ಆರಂಭಗೊಂಡಿರುವ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಗೆ 4ನೇ ದಿನವೂ ಸರ್ವರ್‌ ಸಮಸ್ಯೆಯ ತಲೆನೋವಾಗಿದೆ. ಸಮೀಕ್ಷೆ ಶುರುವಾಗಿ 4ನೇ ದಿನಕ್ಕೆ ಕಾಲಿಟ್ಟರೂ ಸರ್ವರ್ ಸಮಸ್ಯೆ ಬಗೆಹರಿಯುವ ಲಕ್ಷಣಗಳು ಮಾತ್ರ ಗೋಚರಿಸುತ್ತಿಲ್ಲ. ಹೀಗಾಗಿ ಶಾಲಾ ಶಿಕ್ಷಕರು ಪ್ರತಿ ಮನೆಮನೆಗೆ ತೆರಳಿ ಗಂಟೆಗಟ್ಟಲೇ ಓಟಿಪಿಗಾಗಿ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಸಮೀಕ್ಷಕರ ಪರದಾಟಗಳು ಅನಾವರಣಗೊಂಡಿದೆ.
15 ದಿನಗಳಲ್ಲಿ ಜಾತಿ ಜನಗಣತಿ ಕಾರ್ಯ ಮುಗಿಸಬೇಕೆಂದು ಈಗಾಗಲೇ ಶಿಕ್ಷಕರಿಗೆ ಸೂಚನೆ ಕೊಟ್ಟಿದೆ. ದಸರಾ ರಜೆ ಕೂಡ ಇರೋದ್ರಿಂದ ಶಿಕ್ಷಕರು ನಿತ್ಯ ಸಮೀಕ್ಷಾ ಕಾರ್ಯದಲ್ಲಿ ತೊಡಗಿದ್ದಾರೆ. ಆದ್ರೆ ಕೊಡಗಿನಲ್ಲಿ ಸರ್ವರ್‌ ಸಮಸ್ಯೆ ಇರೋದ್ರಿಂದ ಸಮೀಕ್ಷಾ ಮಾಹಿತಿಯನ್ನ ಮೊಬೈಲ್‌ ಆ್ಯಪ್‌ನಲ್ಲಿ ದಾಖಲಿಸಲು ಸಾಧ್ಯವಾಗುತ್ತಿಲ್ಲ.
ಹೇಗೋ ಹರಸಾಹಸ ಮಾಡಿ ಎಲ್ಲಾ ಮಾಹಿತಿಯನ್ನ ಆ್ಯಪ್‌ನಲ್ಲಿ ದಾಖಲಿಸಿದ್ರೆ ಓಟಿಪಿ ಹಾಕುವ ಸಂದರ್ಭದಲ್ಲೇ ಕೈಕೊಡುತ್ತಿದೆ. ಹೀಗಾಗಿ ಶಾಲಾ ಶಿಕ್ಷಕರು ಓಟಿಪಿಗಾಗಿ ಗಂಟೆಗಟ್ಟಲೆ ಕಾದು ಹೈರಾಣಾಗುತ್ತಿದ್ದಾರೆ. ಸರ್ವೇ ನಡೆಸಲು ಎರಡು ಮೂರು ಗಂಟೆಗಳ ಕಾಲ ಶಿಕ್ಷಕರು ಒಂದೇ ಮನೆ ಬಳಿ ಕುಳಿತಿರುತ್ತಾರೆ. ಇದರಿಂದ ಮಾಹಿತಿ ನೀಡುತ್ತಿರುವ ಜನಸಾಮಾನ್ಯರಿಗೂ ಕಿರಿಕಿರಿ ಉಂಟಾಗುತ್ತಿದೆ.
ಇನ್ನೂ ಕೊಡಗು ಗುಡ್ಡಗಾಡು ಪ್ರದೇಶ ಆಗಿರುವುದರಿಂದ ಗ್ರಾಮೀಣ ಪ್ರದೇಶಗಳಲ್ಲಿ ಗಣತಿದಾರರು ನೆಟ್‌ವರ್ಕ್ ಸಮಸ್ಯೆ ಎದುರಿಸುತ್ತಿದ್ದಾರೆ. ಒಂದು ಮನೆಯ ಪೂರ್ಣ ವಿವರ ದಾಖಲಿಸಿ ಅಪ್‌ಲೋಡ್‌ ಮಾಡಿದ ನಂತರ ಮತ್ತೊಂದು ಮನೆ ಗಣತಿ ನಡೆಸಬೇಕು. ಆದ್ರೆ ಇಲ್ಲಿನ ಜನರ ಬಳಿ ಬಹುತೇಕ 4ಜಿ ಮೊಬೈಲ್‌ಗಳಿವೆ ನೆಟ್‌ವರ್ಕ್‌ ಸಮಸ್ಯೆ ಕೂಡ ಕಾಡುತ್ತಿರೋದ್ರಿಂದ, ಆ್ಯಪ್‌ ಡೌನ್‌ಲೋಡ್‌ ಮಾಡೋದು ಕೂಡ ಸಮಸ್ಯೆಯಾಗ್ತಿದೆ. ಸಾರ್ವಜನಿಕರ ಮನೆಗಳ ಲೊಕೆಷನ್ ಮಾಹಿತಿಯೂ ನೆಟ್‌ವರ್ಕ್ ಸಮಸ್ಯೆಯಿಂದ ಸರಿಯಾಗಿ ನಮೂದಾಗುತ್ತಿಲ್ಲ. ಇನ್ನೂ ಹೆಚ್ಚಿನ ಸಂಖ್ಯೆಯ ಕಾರ್ಮಿಕರು ಸಂಜೆ 5 ಗಂಟೆ ನಂತರವೇ ಮನೆಗೆ ಬರ್ತಾರೆ. ಆದ್ರೆ ಸಂಜೆಯಾಗ್ತಿದ್ದಂತೆ ಕಾಡಾನೆಗಳ ಕಾಡ ಶುರುವಾಗುತ್ತಿದೆ ಎಂದು ಅಲವತ್ತುಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!