ಉದಯವಾಹಿನಿ, ನವದೆಹಲಿ: ಆಪರೇಷನ್ ಸಿಂಧೂರ ಕಾರ್ಯಾಚರಣೆ ಬಳಿಕ ರಕ್ಷಣಾ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಿರುವ ಭಾರತ , ಸ್ವದೇಶಿ ಅಸ್ತ್ರಗಳನ್ನು ಸೇನೆಗೆ ಸೇರ್ಪಡೆ ಮಾಡಿಕೊಳ್ಳುತ್ತಲೇ ಇದೆ. ಈ ಸಾಲಿಗೆ ಮತ್ತೊಂದು ಶಕ್ತಿಶಾಲಿ ಅಸ್ತ್ರ ಸೇರ್ಪಡೆಯಾಗಿದೆ. ತನ್ನ ರಕ್ಷಣಾ ಸಾಮರ್ಥ್ಯ ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯೊಂದನ್ನಿಟ್ಟಿದೆ. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಬುಧವಾರ ರಾತ್ರಿ ರೈಲು-ಆಧಾರಿತ ಮೊಬೈಲ್ ಲಾಂಚರ್‌ನಿಂದ ಹೊಸ ತಲೆಮಾರಿನ ಬ್ಯಾಲಿಸ್ಟಿಕ್ ಕ್ಷಿಪಣಿಯಾದ ಅಗ್ನಿ-ಪ್ರೈಮ್‌ನ್ನು ಯಶಸ್ವಿಯಾಗಿ ಪರೀಕ್ಷಿಸಿದೆ.
ಒಡಿಶಾದ ಬಾಲಾಸೋರ್‌ನಲ್ಲಿರುವ ಡಾ. ಎಪಿಜೆ ಅಬ್ದುಲ್ ಕಲಾಂ ದ್ವೀಪದಿಂದ ಪರೀಕ್ಷೆ ನಡೆಸಲಾಗಿದೆ. ಅಗ್ನಿ-ಪ್ರೈಮ್ ಕ್ಷಿಪಣಿಯು ರೈಲು-ಆಧಾರಿತ ಮೊಬೈಲ್ ಲಾಂಚರ್‌ನಿಂದ ಯಶಸ್ವಿಯಾಗಿ ಉಡಾವಣೆಗೊಂಡಿದ್ದು, ತನ್ನ ಗುರಿ ನಿಖರವಾಗಿ ತಲುಪಿದೆ. ಈ ಕ್ಷಿಪಣಿಯು 2,000 ಕಿಲೋಮೀಟರ್‌ವರೆಗಿನ ಗುರಿಗಳನ್ನು ತಲುಪುವ ಸಾಮರ್ಥ್ಯ ಹೊಂದಿದೆ.
ವಿಶೇಷವಾಗಿ ವಿನ್ಯಾಸಗೊಳಿಸಲಾದ ಮಿಸೈಲ್ ಸುಧಾರಿತ ಸಂಚರಣೆ, ಮಾರ್ಗದರ್ಶಿ ವ್ಯವಸ್ಥೆ ಹೊಂದದ್ದು, ಹೆಚ್ಚಿನ ನಿಖರತೆಯೊಂದಿಗೆ ಗುರಿ ತಲುಪುವ ಸಾಮರ್ಥ್ಯ ಹೊಂದಿದೆ. ಅಲ್ಲದೇ ಕ್ಷಿಪಣಿಯು ತ್ವರಿತವಾಗಿ ವಿವಿಧ ಸ್ಥಳಗಳಿಗೆ ಸ್ಥಳಾಂತರಿಸಲು ಮತ್ತು ಉಡಾವಣೆಗೊಳಿಸಲು ಅನುಕೂಲವಾಗಿದೆ. ಈ ಯಶಸ್ವಿ ಪರೀಕ್ಷೆಯಿಂದ ಭಾರತ ಮೊಬೈಲ್ ರೈಲು ಜಾಲಗಳಿಂದ (ಆನ್ ದಿ ಮೂವ್) ಕ್ಷಿಪಣಿಗಳನ್ನು ಉಡಾಯಿಸುವ ಸಾಮರ್ಥ್ಯ ಹೊಂದಿರುವ ಹಾಗೂ ಕ್ಯಾನಿಸ್ಟರೈಸ್ಡ್ ಉಡಾವಣಾ ವ್ಯವಸ್ಥೆ ಹೊಂದಿರುವ ಆಯ್ದ ದೇಶಗಳ ಗುಂಪಿಗೆ ಸೇರಲಿದೆ.
