ಉದಯವಾಹಿನಿ, ಮೊಹಾಲಿ: ಕ್ರೀಡಾಂಗಣದಲೇ ಕಬಡ್ಡಿ ಆಟಗಾರನನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಮಾಸ್ಟರ್ ಮೈಂಡ್ ನನ್ನು ಮೊಹಾಲಿ ಪೊಲೀಸರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.ಕಳೆದ ಸೋಮವಾರ ಪಂಜಾಬ್‌ನ ಮೊಹಾಲಿಯಲ್ಲಿ ಖ್ಯಾತ ಕಬಡ್ಡಿ ಪಟು ರಾಣಾ ಬಾಲಚೌರಿಯಾ ಅವರ ಮೇಲೆ ಗುಂಡಿನ ದಾಳಿ ನಡೆಸಿ ಕೊಲೆ ಮಾಡಲಾಗಿತ್ತು. ಈ ಪ್ರಕರಣ ದೇಶಾದ್ಯಂತ ಆತಂಕ ಹೆಚ್ಚಿಸಿತ್ತು. ಇದೀಗ ಪ್ರಕರಣದ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಮಾಸ್ಟರ್ ಮೈಂಡ್ ನನ್ನು ಎನ್‌ಕೌಂಟರ್ ಮಾಡಿ ಕೊಂದು ಹಾಕಿದ್ದಾರೆ.
ಪಂಜಾಬ್‌ನ ಮೊಹಾಲಿಯಲ್ಲಿ ಸೋಮವಾರ ನಡೆದ ಪಂದ್ಯದ ವೇಳೆ ಕಬಡ್ಡಿ ಆಟಗಾರ ರಾಣಾ ಬಾಲಚೌರಿಯಾ ಅವರನ್ನು ಗುಂಡಿಕ್ಕಿ ಕೊಲೆ ಮಾಡಲಾಗಿತ್ತು. ಘಟನೆ ನಡೆದ ಎರಡು ದಿನಗಳ ಬಳಿಕ ಬುಧವಾರ ಪೊಲೀಸರು ಆರೋಪಿ ಮಾಸ್ಟರ್‌ಮೈಂಡ್ ಹರ್ಪಿಂದರ್ ಸಿಂಗ್ ನನ್ನು ಎನ್‌ಕೌಂಟರ್ ಮಾಡಿದ್ದಾರೆ. ಈ ಸಂದರ್ಭದಲ್ಲಿ ಇಬ್ಬರು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಲಾಲ್ರು ಬಳಿ ಇದ್ದ ತಾರ್ನ್ ತರನ್ ನಿವಾಸಿ ಹರ್ಪಿಂದರ್ ಸಿಂಗ್ ಪೊಲೀಸ್ ತಂಡದ ಮೇಲೆ ಗುಂಡಿನ ದಾಳಿ ಮಾಡಿದ್ದಾನೆ. ಇದಕ್ಕೆ ಪ್ರತಿಯಾಗಿ ಪೊಲೀಸರು ಕೂಡ ದಾಳಿ ನಡೆಸಿದ್ದು, ಹರ್ಪಿಂದರ್ ಗಾಯಗೊಂಡಿದ್ದಾನೆ. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ ಆತ ಸಾವನ್ನಪ್ಪಿದ್ದಾನೆ. ಇದೇ ಪ್ರಕರಣಕ್ಕೆ ಸಂಬಂಧಿಸಿ ದೆಹಲಿ ವಿಮಾನ ನಿಲ್ದಾಣದಲ್ಲಿ ಮತ್ತೋರ್ವ ಆರೋಪಿ ಐಶ್‌ದೀಪ್ ಸಿಂಗ್ ಎಂಬಾತನನ್ನು ಬಂಧಿಸಲಾಗಿತ್ತು. ಆತ ನೀಡಿದ ಮಾಹಿತಿಯನ್ನು ಆಧರಿಸಿ ಹರ್ಪಿಂದರ್ ಸಿಂಗ್ ನನ್ನು ಪತ್ತೆ ಹಚ್ಚಲಾಗಿದೆ. ಕಬಡ್ಡಿ ಪಟು ರಾಣಾ ಬಾಲಚೌರಿಯಾ ಹತ್ಯೆಗೆ ಐಶ್ ದೀಪ್ ಸಿಂಗ್ ಮಾಸ್ಕೋದಿಂದ ಆಗಮಿಸಿದ್ದು, ಕೊಲೆ ಮಾಡಿದ ಬಳಿಕ ಮಸ್ಕತ್‌ಗೆ ಹೋಗಲು ದೆಹಲಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದನು.
