ಉದಯವಾಹಿನಿ, ಬೆಂಗಳೂರು: ಜಾತಿಗಳ ಸಾಮಾಜಿಕ ಆರ್ಥಿಕ ಸಮೀಕ್ಷೆಗೆ ಮಧ್ಯಂತರ ತಡೆ ನೀಡಲು ಹೈಕೋರ್ಟ್ ನಿರಾಕರಿಸಿದ್ದು ರಾಜ್ಯ ಸರ್ಕಾರಕ್ಕೆ ಬಿಗ್‌ ರಿಲೀಫ್‌ ಸಿಕ್ಕಿದೆ.ಮುಖ್ಯ ನ್ಯಾ.ವಿಭು ಬಖ್ರು ಮತ್ತು ನ್ಯಾ.ಸಿ.ಎಂ.ಜೋಶಿ ಅವರಿದ್ದ ವಿಭಾಗೀಯ ಪೀಠದಲ್ಲಿ ವೀರಶೈವ ಲಿಂಗಾಯತ ಮಹಾಸಭಾ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಮತ್ತು ರಾಜ್ಯ ಒಕ್ಕಲಿಗರ ಸಂಘ ಮತ್ತು ಇತರರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಯಿತು. ಕೇಂದ್ರ ಸರ್ಕಾರ ಈ ಸಮೀಕ್ಷೆಗೆ ವಿರೋಧ ವ್ಯಕ್ತಪಡಿಸಿದರೆ ರಾಜ್ಯ ಸರ್ಕಾರ ಬಲವಾಗಿ ಸಮರ್ಥಿಸಿಕೊಂಡಿತ್ತು.
ದೀರ್ಘಕಾಲ ವಾದ, ಪ್ರತಿವಾದ ಆಲಿಸಿದ ಕೋರ್ಟ್‌, ಪೀಠ – ಮೇಲಿನದನ್ನು ಗಮನದಲ್ಲಿಟ್ಟುಕೊಂಡು ನಡೆಯುತ್ತಿರುವ ಸಮೀಕ್ಷೆಯನ್ನು ನಾವು ನಿಷೇಧಿಸಲು ಸಾಧ್ಯವಿಲ್ಲ. ಆದಾಗ್ಯೂ ಸಂಗ್ರಹಿಸಿದ ದತ್ತಾಂಶವನ್ನು ಯಾವುದೇ ವ್ಯಕ್ತಿ ಬಹಿರಂಗಪಡಿಸಬಾರದು ಎಂದು ಸೂಚಿಸಿದೆ.
ದತ್ತಾಂಶವನ್ನು ಸಂಪೂರ್ಣವಾಗಿ ರಕ್ಷಿಸಲಾಗಿದೆ ಮತ್ತು ಗೌಪ್ಯವಾಗಿಡಲಾಗಿದೆ ಎಂದು ಆಯೋಗವು ಖಚಿತಪಡಿಸಿಕೊಳ್ಳಬೇಕು. ಈ ಪ್ರಕರಣ ಇತ್ಯರ್ಥವಾಗುವರೆಗೆ ಯಾವುದೇ ಕಾರಣಕ್ಕೂ ಸಂಗ್ರಹಿಸಿದ ಮಾಹಿತಿ ಸೋರಿಕೆ ಆಗುವುದಿಲ್ಲ ಎಂದು ಹಿಂದುಳಿದ ವರ್ಗಗಳ ಆಯೋಗ ಅಫಿಡವಿಟ್‌ ಸಲ್ಲಿಸಬೇಕು. ಜನರು ಸ್ವಯಂಪ್ರೇರಣೆಯಿಂದ ನೀಡಿದರಷ್ಟೇ ಮಾಹಿತಿ ಪಡೆಯಬೇಕು. ಈ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಬೇಕು. ಮಾಹಿತಿ ನೀಡುವಂತೆ ಯಾವುದೇ ಒತ್ತಡ ಹಾಕಬಾರದು ಎಂದು ಷರತ್ತು ವಿಧಿಸಿ ಡಿಸೆಂಬರ್ ಎರಡನೇ ವಾರಕ್ಕೆ ಅರ್ಜಿ ವಿಚಾರಣೆಯನ್ನು ಮುಂದೂಡಿಕೆ ಮಾಡಿದೆ.

Leave a Reply

Your email address will not be published. Required fields are marked *

error: Content is protected !!