ಉದಯವಾಹಿನಿ, ನವದೆಹಲಿ, ಸೆಪ್ಟೆಂಬರ್ 25: ಈ ಜಗತ್ತು ದೊಡ್ಡ ಸಂಘರ್ಷ ಮತ್ತು ತುಮುಲಗಳ ಕಾಲಘಟ್ಟಕ್ಕೆ ಜಾರುತ್ತಿದೆ ಎಂದು ಖ್ಯಾತ ಹೂಡಿಕೆದಾರ ರೇ ಡಾಲಿಯೋ ಎಚ್ಚರಿಸಿದ್ದಾರೆ. ‘ಡೈರಿ ಆಫ್ ಎ ಸಿಇಒ’ ಎನ್ನುವ ಪೋಡ್​ಕ್ಯಾಸ್ಟ್​ನಲ್ಲಿ ಮಾತನಾಡುತ್ತಿದ್ದ ಅವರು, 80 ವರ್ಷದ ಕಾಲಚಕ್ರ ಪುನಾವೃತ್ತಿಗೊಳ್ಳುವುದನ್ನು ಎತ್ತಿತೋರಿಸಿದ್ದಾರೆ. ಅಂದರೆ, 80 ವರ್ಷಕ್ಕೊಮ್ಮೆ ಜಗತ್ತು ಸಂಘರ್ಷದ ಕಾಲಘಟ್ಟಕ್ಕೆ ಜಾರುತ್ತದೆ ಎಂಬುದು ಅವರ ವಾದ. ಎರಡನೇ ವಿಶ್ವ ಮಹಾಯುದ್ಧ ಮುಗಿದು ಎಂಟು ದಶಕಗಳೇ ಆಗಿವೆ. ಮತ್ತೊಮ್ಮೆ ವಿಶ್ವ ಮಹಾಯುದ್ಧವಾಗುವ ಸಂದರ್ಭ ಬಂದಿದೆಯಾ ಎಂದನಿಸಬಹುದು.
ಅಮೆರಿಕ ಮತ್ತು ಚೀನಾ ನಡುವೆ ತಂತ್ರಜ್ಞಾನ ಪೈಪೋಟಿ ನಡೆದಿದೆ. ಬೇರೆಯವರು ಈ ಆಟದಲ್ಲಿ ಇಲ್ಲ. ಈ ಟೆಕ್ನಾಲಜಿ ವಾರ್ ಗೆದ್ದವರು ಆರ್ಥಿಕ ಯುದ್ಧ ಮತ್ತು ಜಾಗತಿಕ ರಾಜಕೀಯ ಯುದ್ಧ ಸೇರಿದಂತೆ ಎಲ್ಲಾ ಯುದ್ಧಗಳಲ್ಲೂ ಗೆಲ್ಲುತ್ತಾರೆ’ ಎಂದು ವಿಶ್ವದ ಅತಿದೊಡ್ಡ ಹೆಡ್ಜ್ ಫಂಡ್ ಎನಿಸಿರುವ ಬ್ರಿಡ್ಜ್​ವಾಟರ್ ಅಸೋಸಿಯೇಟ್ಸ್​ನ ಸಂಸ್ಥಾಪಕರೂ ಆದ ರೇ ಡೇಲಿಯೋ ಅಭಿಪ್ರಾಯಪಟ್ಟಿದ್ದಾರೆ.
ಇದೇ ವೇಳೆ ರೇ ಡಾಲಿಯೋ ಅವರು ಅಮೆರಿಕಕ್ಕೆ ಸಂಕಷ್ಟದ ಕಾಲ ಬರುತ್ತಿದೆ ಎಂದೂ ಭವಿಷ್ಯ ನುಡಿದಿದ್ದಾರೆ. ‘ಅಮೆರಿಕ ಮತ್ತು ಬ್ರಿಟನ್ ದೇಶಗಳು ತೀವ್ರ ಕರಾಳ ಕಾಲಘಟ್ಟಕ್ಕೆ ಜಾರುತ್ತಿವೆ. ಬ್ರಿಟನ್ ಸರ್ಕಾರಕ್ಕೆ ಸಾಲದ ಸಮಸ್ಯೆ ಇದೆ. ಯುದ್ಧದ ನಂತರ ಈ ದೇಶ ನಿರಂತರವಾಗಿ ಪತನಗೊಳ್ಳುತ್ತಿದೆ. ಆ ದೇಶದಲ್ಲಿ ಆಂತರಿಕವಾಗಿ ಆಗುತ್ತಿರುವ ಸಂಘರ್ಷಕ್ಕೂ ಅದರ ಹಣಕಾಸು ಸಮಸ್ಯೆಗೂ ಸಂಬಂಧ ಇರುವುದು ಸ್ಪಷ್ಟವಾಗಿದೆ’ ಎಂದು ವಿಶ್ವದ ಪ್ರತಿಷ್ಠಿತ ಹೂಡಿಕೆದಾರರೆನಿಸಿರುವ ಅವರು ತಿಳಿಸಿದ್ದಾರೆ.
‘ಅಮೆರಿಕದಲ್ಲಿ ಉದ್ಯಮಶೀಲತೆ ಮತ್ತು ನಾವೀನ್ಯತೆಯ ಸಂಸ್ಕೃತಿ ಇದೆಯಾದರೂ ಆ ದೇಶಕ್ಕೂ ಸಾಲದ ಬಾಧೆ ಇದೆ. ಅದರ ರಾಜಕೀಯ ವಾತಾವರಣವು ಆಸ್ತಿ ಹಾಗೂ ಮೌಲ್ಯಗಳ ಅಂತರದಿಂದ ಪ್ರಭಾವಿತಗೊಂಡಿದೆ. ಅಲ್ಲಿ ಪ್ರಜಾತಂತ್ರ ಅಪಾಯದಲ್ಲಿದೆ’ ಎಂದು ರೇ ಡಾಲಿಯೋ ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!