ಉದಯವಾಹಿನಿ, ಲಂಡನ್: ಕಟ್ಟಡವೊಂದರ ನಿರ್ಮಾಣ ಮಾಡಬೇಕು ಎಂದರೆ ಹಲವು ತಿಂಗಳು, ಕೆಲವು ಬಾರಿ ವರ್ಷಗಳೇ ಕಳೆಯುತ್ತವೆ. ಆದರೆ, ರಾಜ್ಯದ ಕಂಪನಿಯೊಂದು 64 ಗಂಟೆಗಳಲ್ಲಿ ಕಟ್ಟಡ ನಿರ್ಮಾಣ ಮಾಡಿ, ದಾಖಲೆ ಬರೆದಿದ್ದು, ವಿಶ್ವದ ಗಮನ ಸೆಳೆದಿದೆ.ತುಮಕೂರಿನ ಮೌಂಟ್ ರೂಫಿಂಗ್ ಆ್ಯಂಡ್ ಸ್ಟ್ರಕ್ಚರ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯು 64 ಗಂಟೆಗಳಲ್ಲಿ 1.20 ಲಕ್ಷ ಚದರ ಅಡಿ ಕಟ್ಟಡ ನಿರ್ಮಾಣ ಮಾಡಿ, ವರ್ಲ್ಡ್ ಬುಕ್ ಆಫ್ ರೆಕಾರ್ಡ್ ನಲ್ಲಿ ಸ್ಥಾನ ಪಡೆದುಕೊಂಡಿದೆ.
ಲಂಡನ್‌ನ ಐತಿಹಾಸಿಕ ಯುಕೆ ಸಂಸತ್ ಭವನದಲ್ಲಿ ನಡೆದ 8ನೇ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ ನ ಭವ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮೌಂಟ್ ರೂಫಿಂಗ್ ಆ್ಯಂಡ್ ಸ್ಟ್ರಕ್ಚರ್ಸ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಶೇರ್ ಸಿಂಗ್ ಅವರಿಗೆ ಪ್ರಮಾಣ ಪತ್ರ ನೀಡಿ ಸನ್ಮಾನಿಸಲಾಯಿತು.
ಉಗಾಂಡಾ ದೇಶದ ಉಪ ಪ್ರಧಾನಿ ರೆಬೆಕ್ಕಾ ಕಡಾಗಾ, ಇಂಧನ ಹಾಗೂ ಖನಿಜ ಅಭಿವೃದ್ಧಿ ಸಚಿವ ರೂತ್ ನಂಕಬಿರುವಾ, ಇಂಗ್ಲೆಂಡ್ ನ ಸಂಸದೀಯ ಸದಸ್ಯ ಲಾರ್ಡ್ ರಾಮೀ ರೇಂಜರ್, ಆಂಧ್ರಪ್ರದೇಶ ಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಲೋಕೇಶ್ ನಾರಾ ಇದ್ದರು.
ಕಳೆದ ಮಾರ್ಚ್ ತಿಂಗಳಲ್ಲಿ ತುಮಕೂರು ಜಿಲ್ಲೆಯ ಶಿರಾದ ಕೈಗಾರಿಕಾ ಪ್ರದೇಶದಲ್ಲಿ ಕಂಪನಿಯು ಈ‌ ಕಟ್ಟಡ ನಿರ್ಮಿಸಿದೆ. ಮಾರ್ಚ್ 22 ರಂದು ಐತಿಹಾಸಿಕ ದಾಖಲೆ ಕಟ್ಟಡ ನಿರ್ಮಾಣ ಪೂರ್ಣ ಗೊಂಡಿತು. ಮೂರು ದಿನಗಳಿಗೂ ಮುಂಚೆ ಎಂದರೆ 64 ಗಂಟೆಗಳಲ್ಲಿ 1.20 ಲಕ್ಷ ಚದರ ಅಡಿ ಪ್ರೀ-ಎಂಜಿನಿಯರ್ಡ್ ಬಿಲ್ಡಿಂಗ್ (ಪಿಇಬಿ) ಕಟ್ಟಡ ನಿರ್ಮಿಸಲಾಯಿತು. ಮಾತ್ರವಲ್ಲ 24 ಗಂಟೆಗಳಲ್ಲಿ ಪಾಲಿಯೂರಿತೇನ್ ಫೋಮ್ (PUF) ಪ್ಯಾನ್ ಗಳನ್ನು ನಿರ್ಮಿಸಲಾಯಿತು.

Leave a Reply

Your email address will not be published. Required fields are marked *

error: Content is protected !!