ಉದಯವಾಹಿನಿ,ಚಿಕ್ಕಮಗಳೂರು: ಗೃಹ ಜ್ಯೋತಿ ಯೋಜನೆಗೆ 86.5 ಲಕ್ಷ ಜನರು ಅರ್ಜಿ ಸಲ್ಲಿಸಿದ್ದು, ಸಾರ್ವಜನಿಕರಿಂದ ಉತ್ತಮ ಸ್ಪಂದನೆ ದೊರೆಯುತ್ತಿದೆ. ಅರ್ಜಿ ಸಲ್ಲಿಸದವರು ಕೂಡಲೇ ಸಲ್ಲಿಸಬೇಕು ಎಂದು ಇಂಧನ ಸಚಿವ ಕೆ.ಜೆ ಜಾರ್ಜ್ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಜುಲೈ 1ರಿಂದ ಎಲ್ಲರಿಗೂ ಉಚಿತ ವಿದ್ಯುತ್ ನೀಡಲಾಗುವುದು. ಈ ತಿಂಗಳು ಕೊನೆಗೆ ಎಲ್ಲರಿಗೂ ಬಿಲ್ ಬರುತ್ತದೆ. ಅರ್ಜಿ ಸಲ್ಲಿಸಲು ಜುಲೈ ಅಂತ್ಯದವರೆಗೆ ಅವಕಾಶ ಇದ್ದು, ಅರ್ಹರು ಆಗಸ್ಟ್‌ನಿಂದ ಯೋಜನೆ ವ್ಯಾಪ್ತಿಗೆ ಒಳಪಡಲಿದ್ದಾರೆ’ ಎಂದು ತಿಳಿಸಿದರು. ಅರ್ಜಿ ಹಾಕದವರು ಬೇಗ ಹಾಕಬೇಕು. ಕೆಪಿಟಿಸಿಎಲ್ ಕಚೇರಿಗೆ ಹೋಗಿ ಅರ್ಜಿ ಸಲ್ಲಿಸಬಹುದು. ಈಗ ಅಷ್ಟು ಸಮಸ್ಯೆ ಇಲ್ಲ, ಒತ್ತಡ ಕಡಿಮೆ ಆಗಿದೆ. ಅರ್ಜಿ ಹಾಕದವರಿಗೆ ಉಚಿತ ವಿದ್ಯುತ್ ಸಿಗಲ್ಲ. ಅರ್ಜಿ ಹಾಕುವುದು ತಡವಾದರೆ ಸೌಲಭ್ಯ ಸಿಗುವುದು ತಡವಾಗುತ್ತದೆ ಎಂದು ಹೇಳಿದರು.
