ಉದಯವಾಹಿನಿ,ಹೊನ್ನಾಳಿ: ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ ಅವರು ಓದಿದ್ದ ಇಲ್ಲಿನ ಸರ್ಕಾರಿ ಶಾಲೆಯು ಕುಡಿಯುವ ನೀರಿನ ಸೌಕರ್ಯದಿಂದ ವಂಚಿತವಾಗಿದೆ. ಸಮಸ್ಯೆ ಪರಿಹರಿಸುವಂತೆ ಆಗ್ರಹಿಸಿ ಮುಖ್ಯಶಿಕ್ಷಕರು ಹಾಗೂ ಸಹ ಶಿಕ್ಷಕರು ಪುರಸಭೆಯ ಮುಖ್ಯಾಧಿಕಾರಿಯನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದರೂ ಪರಿಸ್ಥಿತಿ ಸುಧಾರಿಸಿಲ್ಲ. ಶತಮಾನ ಪೂರೈಸಿರುವ ಪೇಟೆ ಪ್ರದೇಶದಲ್ಲಿನ ಈ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಕುಡಿಯುವ ಜೊತೆಗೆ ಶೌಚಾಲಯದಲ್ಲಿ ಬಳಸುವುದಕ್ಕೂ ನೀರು ದೊರೆಯುತ್ತಿಲ್ಲ. ಈ ಹಿಂದೆ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇತ್ತು. ಆದರೆ ಈಗ 200ಕ್ಕೂ ಅಧಿಕ ಮಂದಿ ಇಲ್ಲಿ ಕಲಿಯುತ್ತಿದ್ದಾರೆ. ನೀರಿನ ಸಮಸ್ಯೆ ಬಗೆಹರಿಯಬೇಕಾದರೆ ಪ್ರತ್ಯೇಕ ಪೈಪ್‍ಲೈನ್ ಅಳವಡಿಸಬೇಕು ಎಂದು ಶಿಕ್ಷಕರು ಹೇಳಿದ್ದಾರೆ. ‘ಇತ್ತೀಚೆಗೆ ಶಾಲೆಯಲ್ಲಿ ಒಂದಷ್ಟು ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ. ಹೊಸದಾಗಿ ಆವರಣ ಗೋಡೆ ನಿರ್ಮಿಸಲಾಗಿದೆ. ನೂತನ ಕೊಠಡಿಗಳ ನಿರ್ಮಾಣ ಕಾರ್ಯವೂ ಪ್ರಗತಿಯಲ್ಲಿದೆ. ಆದರೆ, ಕುಡಿಯುವ ನೀರಿನ ಸಮಸ್ಯೆ ಮಾತ್ರ ಹಾಗೆಯೇ ಉಳಿದಿದೆ’ ಎಂದು ಶಾಲೆಯ ಮುಖ್ಯಶಿಕ್ಷಕಿ ರತ್ನಮ್ಮ ಹೇಳಿದರು. ಶಾಲೆಯ ಬಹುತೇಕ ವಿದ್ಯಾರ್ಥಿಗಳು ರಸ್ತೆಬದಿಯಲ್ಲಿ ಶೌಚಕ್ಕೆ ಹೋಗುತ್ತಾರೆ ಎಂದು ಸಾರ್ವಜನಿಕರು ದೂರಿದ್ದಾರೆ.
