ಉದಯವಾಹಿನಿ,ಸಿದ್ದಾಪುರ: ಕಣ್ಣಂಗಾಲ ಗ್ರಾಮದಲ್ಲಿ ಕಾಡಾನೆ ಹಾವಳಿ ಮಿತಿಮೀರಿದ್ದು, ಕಾಡಾನೆಗಳನ್ನು ಕಾಡಿಗೆ ಅಟ್ಟಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಕಣ್ಣಂಗಾಲ ಗ್ರಾಮದ ಎಂ.ಸಿ ಮುದ್ದಯ್ಯ ಎಂಬವರ ಕಾಫಿ ತೋಟದಲ್ಲಿ ಐದಕ್ಕೂ ಅಧಿಕ ಕಾಡಾನೆಗಳು ಬೀಡುಬಿಟ್ಟಿದ್ದು, ತೆಂಗು. ಕಾಫಿ, ಅಡಿಕೆ ಸೇರಿದಂತೆ ಕೃಷಿ ಫಸಲನ್ನು ನಾಶ ಮಾಡುತ್ತಿವೆ. ರಾತ್ರಿ ವೇಳೆ ಕಾಡಾನೆ ಹಿಂಡು ಮನೆಯ ಆವರಣಕ್ಕೆ ಬರುತ್ತಿದ್ದು, ಮನೆಯ ಬಳಿಯ ಹೂಕುಂಡ ಸೇರಿದಂತೆ ಸಾಮಾಗ್ರಿಗಳನ್ನು ನಾಶಪಡಿಸುತ್ತಿದೆ ಎಂದು ಮುದ್ದಯ್ಯ ಆರೋಪಿಸಿದ್ದಾರೆ. ಕಣ್ಣಂಗಾಲ, ಹಚ್ಚಿನಾಡು ವ್ಯಾಪ್ತಿಯಲ್ಲಿ ಪ್ರತಿದಿನ ಕಾಡಾನೆ ಹಾವಳಿ ಇದ್ದು, ರೈತರು, ಕಾರ್ಮಿಕರು ಹಾಗೂ ಸಾರ್ವಜನಿಕರು ಕಂಗಾಲಗಿದ್ದಾರೆ. ತೋಟ ಕಾರ್ಮಿಕರು ಕೆಲಸಕ್ಕೆ ತೆರಳಲು ಹಿಂದೇಟು ಹಾಕುತ್ತಿದ್ದು, ಶಾಲಾ ಮಕ್ಕಳು ಭಯದಿಂದಲೇ ಸಂಚರಿಸುವಂತಾಗಿದೆ. ಕಾಡಾನೆಗಳನ್ನು ಕಾಡಿಗೆ ಅಟ್ಟಿ, ಬಳಿಕ ಹಿಂತಿರುಗಿ ಬಾರದಂತೆ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.
