ಉದಯವಾಹಿನಿ,ಶಿವಮೊಗ್ಗ: ಬಲವಂತವಾಗಿ ಮತಾಂತರ ಮಾಡೋದನ್ನ ವಿರೋಧಿಸಿ, ನಮ್ಮ ಸರ್ಕಾರ ಕಾಯ್ದೆ ತಂದಿತ್ತು ಎಂದು ಸಂಸದ ಬಿವೈ ರಾಘವೇಂದ್ರ ಹೇಳಿದ್ದಾರೆ. ಶಿಕಾರಿಪುರದಲ್ಲಿ ಗೋಮಾಂಸ ವಿಚಾರವಾಗಿ ಎರಡು ಕೋಮುಗಳ ನಡುವಿನ ಗಲಾಟೆ ಬಗ್ಗೆ ಶಿವಮೊಗ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ತಮ್ಮ ಧರ್ಮದ ಹಬ್ಬಗಳ ಆಚರಣೆಗೆ ಎಲ್ಲರೂ ಸ್ವತಂತ್ರರು. ನಮ್ಮ ಸರ್ಕಾರ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಗೆ ತಂದಿತ್ತು. ನಿನ್ನೆ ಶಿರಾಳಕೊಪ್ಪ ಸಮೀಪದ ಪುಣೇದಹಳ್ಳಿ ಬಳಿ ಗೋಮಾಂಸ ಸಿಕ್ಕಿದೆ. ಒಂದು ಆಟೋದಲ್ಲಿ 2-3 ಕ್ವಿಂಟಾಲ್ ಗೋ ಮಾಂಸ ಸಿಕ್ಕಿದೆ.
ಪೊಲೀಸರು ಅದನ್ನ ಸೀಜ್ ಮಾಡಿ, ಠಾಣೆಗೆ ತಂದಿದ್ದಾರೆ ಎಂದರು. ಗೋ ಮಾಂಸದ ಬಗ್ಗೆ ಮಾಹಿತಿ ನೀಡಿದ ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದ್ದಾರೆ. ಜೊತೆಗೆ ಅವಾಚ್ಯ ಶಬ್ಧಗಳಿಂದ ದೂಷಿಸುವ ಕೆಲಸ ಮಾಡಿದ್ದಾರೆ. ಗೋಮಾಂಸ ತಂದವರ ವಿರುದ್ದ ಕ್ರಮಕೈಗೊಳ್ಳಬೇಕು. ಠಾಣೆಯ ಮುಂದೆ ಹಲ್ಲೆ ಮಾಡಲು ಯತ್ನಿಸಿದವರ ಮೇಲೆ ಕ್ರಮ ಆಗಬೇಕು. ಜೊತೆಗೆ ಈ ಘಟನೆಗೆ ಪ್ರಚೋದನೆ ನೀಡಿದ ವ್ಯಕ್ತಿಗಳ ಮೇಲೆ ತ್ವರಿತ ಕ್ರಮ ತೆಗೆದುಕೊಳ್ಳಬೇಕು.
