ಉದಯವಾಹಿನಿ, ಕಲಬುರಗಿ: ಮಹಾರಾಷ್ಟ್ರದಲ್ಲಿ ಮಹಾಮಳೆ ಅಬ್ಬರಿಸುತ್ತಿದೆ. ಮಹಾರಾಷ್ಟ್ರದ ಜಲಾಶಯಗಳಿಂದ ಅಪಾರ ಪ್ರಮಾಣದ ನೀರನ್ನು ಭೀಮಾ ನದಿಗೆ ಬಿಡಲಾಗ್ತಿದೆ. ಪರಿಣಾಮ ರಾಜ್ಯದಲ್ಲಿ ನೆರೆ ಪರಿಸ್ಥಿತಿ ನಿರ್ಮಾಣವಾಗಿದೆ. ಕಲಬುರಗಿಯಲ್ಲಿ ಹರಿಯುವ ಭೀಮೆ ಅಪಾಯದ ಮಟ್ಟ ಮೀರಿದೆ. ಕಂಡಕಂಡಲೆಲ್ಲ ಭೀಮೆಯ ನೀರು ನುಗ್ಗುತ್ತಿದೆ. ಸಿಕ್ಕಿದೆಲ್ಲವನ್ನು ಅಪೋಷನ ಪಡೆಯುತ್ತಿದೆ.ಜಿಲ್ಲೆಯ ಸೇಡಂ ತಾಲೂಕಿನ ಮಳಖೇಡ ಗ್ರಾಮವನ್ನ ಭೀಮಾ ನದಿಯ ನೀರು ಆವರಿಸಿದೆ. ಭೀಮಾ ನದಿ ಜೊತೆ ಕಾಗಿಣಾ ನದಿಯಲ್ಲೂ ಪ್ರವಾಹ (Flood) ಉಂಟಾಗಿದ್ದು, ಮಳಖೇಡ ತಾಂಡಾದ ಹಲವು ಮನೆಗಳಿಗೆ ನೀರು ನುಗ್ಗಿದೆ. ಗ್ರಾಮಕ್ಕೆ ಏಕಾಏಕಿ ರಭಸವಾಗಿ ನೀರು ನುಗ್ಗಿದ್ದರಿಂದ ಕಂಗಾಲಾದ ಗ್ರಾಮಸ್ಥರು ಮನೆಯ ಮೇಲ್ಛಾವಣಿ ಮೇಲೆ ಆಶ್ರಯ ಪಡೆದುಕೊಂಡಿದ್ದಾರೆ. ಮನೆಯಲ್ಲಿರುವ ವಸ್ತುಗಳೆಲ್ಲ ನೀರು ಪಾಲಾಗಿದೆ.
ಒಂದು ತಿಂಗಳ ಕಂದಮ್ಮನನ್ನು ಹೊತ್ತು ಕಳೆದೆರಡು ದಿನಗಳಿಂದ ಮೇಲ್ಛಾವಣಿಯಲ್ಲಿ ತಾಯಿ ಆಶ್ರಯ ಪಡೆದಿದ್ದಾರೆ. ಮಳಖೇಡ ಗ್ರಾಮದ ಶೋಭಾ ಎಂಬಾಕೆ ಮಡಿಲಲ್ಲಿ ಒಂದು ತಿಂಗಳ ಮಗು ಹಿಡಿದು ದಿನ ಕಳೆಯುವಂತಾಗಿದೆ. ಜೊತೆಗೆ ಇತರೆ ಮಕ್ಕಳು ಸಹ ಮನೆಯ ಚಾವಣಿ ಏರಿದ್ದಾರೆ. ನೆರವಿಗಾಗಿ ಮೊರೆ ಇಡ್ತಿದ್ದಾರೆ. ಕಣ್ಣು ಹಾಯಿಸಿದ ಕಡೆಯಲ್ಲೆಲ್ಲ ಬರೀ ನೀರೇ ನೀರು ಇದ್ದು.. ಯಾವ ಕಡೆ ಹೋಗಬೇಕೆಂದು ತಿಳಿಯದೇ ಗ್ರಾಮಸ್ಥರು ಕಂಗಾಲಾಗಿದ್ದಾರೆ. 2 ದಿನ ಕಳೆದ್ರೂ ಸಹ ತಾಯಿಮಗುವಿನ ರಕ್ಷಣೆ ಯಾವೊಬ್ಬ ಅಧಿಕಾರಿಗಳು ಬಂದಿಲ್ಲ ಎಂದು ಆಕ್ರೋಶ ಹೊರ ಹಾಕಿದ್ದಾರೆ.
