ಉದಯವಾಹಿನಿ , ಬೆಂಗಳೂರು: ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಸರ್ಕಾರ 3,000 ಕೋಟಿ ರೂ. ಪರಿಹಾರ ನೀಡಬೇಕು ಎಂದು ವಿಪಕ್ಷ ನಾಯಕ ಆರ್.ಅಶೋಕ್ ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಪ್ರವಾಹ ಬಂದು ಸಾವು ನೋವು ಉಂಟಾಗಿದೆ. ಕಲಬುರಗಿ ಹಾಗೂ ಬೀದರ್‌ನಲ್ಲಿ ಹೆಚ್ಚು ಹಾನಿ ಉಂಟಾಗಿದೆ. ಈವರೆಗೆ ಯಾವುದೇ ಸಚಿವರು ಕ್ರಮ ವಹಿಸಿಲ್ಲ. ಬಿಜೆಪಿ ಅವಧಿಯಲ್ಲಿ ಡಬಲ್ ಪರಿಹಾರ ನೀಡಲಾಗಿತ್ತು. ಸರ್ಕಾರದ ಬಳಿ ಹಣವಿದ್ದರೆ ಸಮರೋಪಾದಿಯಲ್ಲಿ ಕೆಲಸ ಮಾಡುತ್ತಿದ್ದರು. ಹಣವಿಲ್ಲದೆ ಸಚಿವರು ಹಾಗೂ ಸಿಎಂ ಮುಖ ತಪ್ಪಿಸಿಕೊಂಡು ಓಡಾಡುತ್ತಿದ್ದಾರೆ. ಸರ್ಕಾರದ ಸಂಪೂರ್ಣ ಗಮನ ಜಾತಿ ಸಮೀಕ್ಷೆಯ ಕಡೆಗಿದೆ. ಮನೆ ಹಾನಿಗೆ ಹಾಗೂ ಬೆಳೆ ಹಾನಿಗೆ ಎಷ್ಟು ಪರಿಹಾರ ನೀಡಲಾಗುವುದು ಎಂದು ಸರ್ಕಾರ ಸ್ಪಷ್ಟವಾಗಿ ತಿಳಿಸಬೇಕು ಎಂದರು.
ಕೇಂದ್ರ ಸರ್ಕಾರ ತನ್ನ ಪಾಲಿನ ಪರಿಹಾರದ ಹಣವನ್ನು ನೀಡುತ್ತದೆ. ರಾಜ್ಯ ಸರ್ಕಾರದಿಂದ ತಕ್ಷಣ 3,000 ಕೋಟಿ ರೂ. ಪರಿಹಾರ ಘೋಷಿಸಿ ವಿತರಣೆ ಮಾಡಬೇಕು. ಬಿಜೆಪಿ ಅವಧಿಯಲ್ಲಿ 30 ದಿನಕ್ಕಾಗುವಷ್ಟು ದಿನಸಿ ನೀಡಲಾಗಿತ್ತು. ಈ ಸರ್ಕಾರ ಅರ್ಧ ಕೆ.ಜಿ ಅಕ್ಕಿಯೂ ಕೊಟ್ಟಿಲ್ಲ. ಬಿಜೆಪಿ ವತಿಯಿಂದ ವಿವಿಧ ಜಿಲ್ಲೆಗಳಲ್ಲಿ ಪ್ರವಾಸ ಮಾಡಲಾಗುತ್ತಿದೆ. ನಾನು ಕೂಡ ಪ್ರವಾಸ ಮಾಡಿ, ಸರ್ಕಾರದ ಕಿವಿ ಹಿಂಡುವ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.
ಇನ್ನೂ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಬಿಜೆಪಿ 40% ಕಮಿಶನ್ ಪಡೆಯುತ್ತಿದೆ ಎಂದು ಸುಳ್ಳು ಆರೋಪ ಮಾಡಿದ್ದರು. ಈಗ ಗುತ್ತಿಗೆದಾರರ ಸಂಘದವರು, ಕಾಂಗ್ರೆಸ್ ಸರ್ಕಾರ ದುಪ್ಪಟ್ಟು ಕಮಿಷನ್ ಪಡೆಯುತ್ತಿದೆ ಎಂದು ಹೇಳಿ ಸಿಎಂಗೆ ಪತ್ರ ಬರೆದಿದ್ದಾರೆ. ಅಂದರೆ ಇದು 80 ಪರ್ಸೆಂಟ್ ಸರ್ಕಾರ ಎಂದು ತಿಳಿದುಬಂದಿದೆ. ಸರ್ಕಾರಕ್ಕೆ ಮಾನ, ಮರ್ಯಾದೆ ಇದ್ದರೆ ಎಲ್ಲರೂ ರಾಜೀನಾಮೆ ನೀಡಬೇಕು.
