ಉದಯವಾಹಿನಿ, ದುಬೈ: ಪಾಕಿಸ್ತಾನವನ್ನು ಈ ಏಷ್ಯಾಕಪ್‌ನಲ್ಲಿ 2 ಬಾರಿ ಹೊಸಕಿ ಹಾಕಿದ ಭಾರತ ತಂಡ ಇದೀಗ ಮತ್ತೊಮ್ಮೆ ಸದೆಬಡಿಯಲು ಸಜ್ಜಾಗಿದೆ. ಇಂದು ದುಬೈನಲ್ಲಿ ನಡೆಯುವ ಫೈನಲ್‌ನಲ್ಲಿ ಸೂರ್ಯಕುಮಾರ್ ಪಡೆ ಶತ್ರುಗಳ ಎದುರು ಗೆಲುವು ಸಾಧಿಸಲಿ ಎಂದು ಅಭಿಮಾನಿಗಳು ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಟೀಮ್ ಇಂಡಿಯಾ ಅಭಿಮಾನಿಗಳು ಬೆಳ್ಳಂಬೆಳಗ್ಗೆ ಮಹಾ ಕಾಳಿ ದೇವಾಲಯದಲ್ಲಿ ದೀಪ ಬೆಳಗಿ ಪ್ರಾರ್ಥಿಸಿದ್ದಾರೆ.
ಗುಂಪು ಹಂತದ ಪಂದ್ಯದಲ್ಲಿ 7 ವಿಕೆಟ್‌ಗಳಿಂದ ಗೆದ್ದಿದ್ದ ಭಾರತ, ಸೂಪರ್-4 ಪಂದ್ಯದಲ್ಲಿ ಪಾಕಿಸ್ತಾನವನ್ನು 6 ವಿಕೆಟ್‌ಗಳಿಂದ ಬಗ್ಗುಬಡಿದಿತ್ತು. ಇಂದು ನಡೆಯಲಿರುವ ಫೈನಲ್‌ನಲ್ಲಿ ಬದ್ಧವೈರಿಯನ್ನು ಮತ್ತೊಮ್ಮೆ ಹೊಸಕಿಹಾಕಿ, 9ನೇ ಬಾರಿಗೆ ಪ್ರಶಸ್ತಿ ಎತ್ತಿಹಿಡಿಯಲು ಭಾರತ ಕಾತರಿಸುತ್ತಿದೆ. ಪಾಕ್ ಎದುರಿನ ಹಿಂದಿನ 7 ಮುಖಾಮುಖಿಗಳಲ್ಲಿ ಭಾರತವೇ ಮೇಲುಗೈ ಸಾಧಿಸಿದೆ. ಅಭಿಷೇಕ್ ಶರ್ಮ ಆರು ಇನಿಂಗ್ಸ್‌ಗಳಲ್ಲಿ 309 ರನ್ ಗಳಿಸುವ ಮೂಲಕ ಟೂರ್ನಿಯ ಗರಿಷ್ಠ ರನ್ ಸ್ಕೋರರ್ ಆಗಿದ್ದಾರೆ. ಅಭಿಷೇಕ್‌ರನ್ನು ಆರಂಭದಲ್ಲಿಯೇ ಪಾಕ್ ಕಟ್ಟಿಹಾಕಿದರೆ ಭಾರತ ಒತ್ತಡದಲ್ಲಿ ಸಿಲುಕುವ ಅಪಾಯವಿದೆ. ವರುಣ್ ಚಕ್ರವರ್ತಿ ಹಾಗೂ ಕುಲದೀಪ್ ಯಾದವ್ ಓವರ್‌ಗಳು ಪಂದ್ಯದ ಲಿತಾಂಶ ನಿರ್ಧರಿಸುವಲ್ಲಿ ನಿರ್ಣಾಯಕ ಪಾತ್ರವಹಿಸಲಿವೆ. ಹಾರ್ದಿಕ್ ಪಾಂಡ್ಯ ಅಲಭ್ಯರಾದರೆ ತಂಡದ ಸಂಯೋಜನೆ ಮೇಲೆ ಪರಿಣಾಮ ಬೀರಲಿದೆ.
