ಉದಯವಾಹಿನಿ, ದುಬೈ: ಏಷ್ಯಾ ಕಪ್ ಫೈನಲ್ ಗೆದ್ದ ಬಳಿಕ ಸುಮಾರು 1 ಗಂಟೆಗಳ ಕಾಲ ದುಬೈ ಮೈದಾನದಲ್ಲಿ ದೊಡ್ಡ ಹೈಡ್ರಾಮಾವೇ ನಡೆಯಿತು. ಅಂತಿಮವಾಗಿ ಭಾರತ ತಂಡಕ್ಕೆ ಟ್ರೋಫಿ ನೀಡದೇ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಧ್ಯಕ್ಷ ಮತ್ತು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷ ಮೊಹ್ಸಿನ್ ನಖ್ವಿ ಮುಜುಗರ ಅನುಭವಿಸಿದರು.
ಮಧ್ಯ ರಾತ್ರಿ ಏನಾಯ್ತು?: ಮಧ್ಯರಾತ್ರಿ 12 ಗಂಟೆಯ ವೇಳೆಗೆ ಪಾಕ್ ತಂಡವನ್ನು ಸೋಲಿಸಿ ಭಾರತ ಚಾಂಪಿಯನ್ ಪಟ್ಟ ಅಲಂಕರಿಸಿತು. ಜಯಗಳಿಸಿದ ಬಳಿಕ ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರಿಂದ ಪೋಡಿಯಂನಲ್ಲಿ ಪ್ರಶಸ್ತಿಯನ್ನು ಸೂರ್ಯಕುಮಾರ್ ಸ್ವೀಕರಿಸುವುದಿಲ್ಲ ಬಿಸಿಸಿಐ ಎಸಿಸಿಗೆ ಹೇಳಿತು. ವೇದಿಕೆಯ ಮೇಲಿದ್ದ ಬೇರೆ ಗಣ್ಯರಿಂದ ಪ್ರಶಸ್ತಿಯನ್ನು ವಿತರಿಸುವಂತೆ ಮನವಿ ಮಾಡಿತು. ಈ ವಿಚಾರವನ್ನು ಎಸಿಸಿ ನಖ್ವಿ ಬಳಿ ಹೇಳಿದಾಗ, ಪ್ರಶಸ್ತಿಯನ್ನು ನೀಡುವುದಾದರೆ ನಾನೇ ನೀಡುತ್ತೇನೆ. ಬೇರೆಯವರು ಪ್ರಶಸ್ತಿ ನೀಡಲು ನಾನು ಒಪ್ಪಿಗೆ ನೀಡುವುದಿಲ್ಲ ಎಂದು ಹೇಳಿದರು. ಈ ವಿಚಾರದ ಬಗ್ಗೆ ಎಸಿಸಿ ಮತ್ತು ಪಿಸಿಬಿ ಮಧ್ಯೆ ದೊಡ್ಡ ಚರ್ಚೆ ನಡೆಯುತ್ತಲೇ ಇತ್ತು.
ಭಾರತ ನಖ್ವಿಯಿಂದ ಪ್ರಶಸ್ತಿ ಸ್ವೀಕರಿಸದೇ ಇರಲು ಕಾರಣ ಸಹ ಇದೆ. ಮೊದಲಿನಿಂದಲೂ ಭಾರತವನ್ನು ಕಟು ಪದಗಳಿಂದ ಟೀಕಿಸುತ್ತಿದ್ದ ನಖ್ವಿ ಏಷ್ಯಕಪ್‌ನಲ್ಲೂ ಟೀಂ ಇಂಡಿಯಾದ ವಿರುದ್ಧ ಕಿಡಿಕಾರಿದ್ದರು. ಈ ಕಾರಣಕ್ಕೆ ಭಾರತ ನಖ್ವಿಯಿಂದ ಪ್ರಶಸ್ತಿ ಸ್ವೀಕರಿಸಲು ನಿರಾಕರಿಸಿತ್ತು.
ಇನ್ನೊಂದು ಕಡೆ ಸೋತ ಬಳಿಕ ಡ್ರೆಸ್ಸಿಂಗ್ ರೂಂ ಒಳಗಡೆ ಹೋದ ಪಾಕ್ ಆಟಗಾರರು ಹೊರಗೆ ಬರಲೇ ಇಲ್ಲ. ಇದರಿಂದಾಗಿ ಪ್ರಶಸ್ತಿ ವಿತರಣಾ ಕಾರ್ಯಕ್ರಮ ತಡವಾಯಿತು. ಪಂದ್ಯ ಮುಗಿದರೂ ಪ್ರಶಸ್ತಿ ವಿತರಣೆಯಾಗದ್ದಕ್ಕೆ ಕಮೆಂಟ್ರಿ ಹೇಳುತ್ತಿದ್ದ ರವಿಶಾಸ್ತ್ರಿ, ಪಂದ್ಯ ಮುಗಿದು 45 ನಿಮಿಷವಾಯಿತು. ಮೈದಾನದಿಂದ ಅಭಿಮಾನಿಗಳು ಹೊರ ಹೋಗುತ್ತಿದ್ದು, ಆಟಗಾರರು ಕಾಯುತ್ತಿದ್ದಾರೆ. ಏನು ನಡೆಯುತ್ತಿದೆ ಎಂದು ಪ್ರಶ್ನಿಸುವ ಮೂಲಕ ಆಕ್ರೋಶ ಹೊರಹಾಕಿದರು.
