ಉದಯವಾಹಿನಿ, ದುಬೈ: ಆರಂಭಿಕ ಬ್ಯಾಟ್ಸ್‌ಮನ್‌ ಅಭಿಷೇಕ್ ಶರ್ಮಾ ಸದ್ಯ ಭಾರತ ತಂಡದಲ್ಲಿ ಅತ್ಯುತ್ತಮ ಬ್ಯಾಟಿಂಗ್‌ ಪ್ರದರ್ಶನವನ್ನು ತೋರುತ್ತಿದ್ದಾರೆ. ಇದರ ಬೆನ್ನಲ್ಲೇ ತಮ್ಮ ಕ್ರಿಕೆಟ್ ಗುರು ಯುವರಾಜ್ ಸಿಂಗ್ ಅವರ ಮಾರ್ಗದರ್ಶನದ ಕುರಿತು ಕೆಲವು ಸಂಗತಿಗಳನ್ನು ಬಹಿರಂಗಪಡಿಸಿದ್ದಾರೆ. ನನ್ನ ವೃತ್ತಿ ಬದುಕಿನ ಸಂಕಷ್ಟದ ಸಮಯದಲ್ಲಿ ಯುವರಾಜ್ ಸಿಂಗ್ ತುಂಬಾ ಸಹಾಯ ಮಾಡಿದ್ದು, ಅವರ ಮಾರ್ಗದರ್ಶನ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಸಿಗುವಂತೆ ಮಾಡಿತು. ಹಾಗಾಗಿ ಮಾಜಿ ಕ್ರಿಕೆಟಿಗ ಮತ್ತು ಅಭಿಷೇಕ್ ನಡುವೆ ಗುರು-ಶಿಷ್ಯರ ನಡುವಿನ ಬಾಂಧ್ಯವ್ಯವಿದೆ. ಬ್ರೇಕ್ ಫಾಸ್ಟ್ ವಿತ್ ಚಾಂಪಿಯನ್ ಎನ್ನುವ ಹೊಸ ಸೀಸನ್‌ನಲ್ಲಿ ಮಾತನಾಡಿದ ಅಭಿಷೇಕ್‌ ಶರ್ಮಾ, ಯುವರಾಜ್ ಸಿಂಗ್ ತಮ್ಮನ್ನ ಹೇಗೆ ಪ್ರೇರೇಪಿಸುತ್ತಿದ್ದರು ಎಂದು ಗೌರವ್ ಕಪೂರ್ ಅವರೊಂದಿಗೆ ಹಂಚಿಕೊಂಡರು.
“ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಆ ಸಮಯದಲ್ಲಿ ನಾನು ಸ್ವಲ್ಪ ಕಷ್ಟಪಡುತ್ತಿದ್ದೆ. ಐಪಿಎಲ್‌ನಲ್ಲೂ ನಾನು ಸ್ಥಿರವಾಗಿರಲಿಲ್ಲ ಮತ್ತು ತಂಡದ ಪ್ಲೇಯಿಂಗ್ XIನಲ್ಲಿಯೂ ನಾನು ಇರಲಿಲ್ಲ. ಶುಭ್‌ಮನ್ ಆಗಲೇ ಭಾರತ ತಂಡದ ಪರ ಆಡುತ್ತಿದ್ದರು. ನನಗೆ ನಾನೇ ಹೇಳಿಕೊಳ್ಳುತ್ತಿದ್ದೆ, ಹೌದು! ನಾನು ಸ್ವಲ್ಪ ತಡವಾಗಿದ್ದೇನೆ, ನಮ್ಮ ಗುಂಪಿನಲ್ಲಿದ್ದವರಿಗಿಂತ ನಾನು ಹಿಂದೆ ಬಿದ್ದಿದ್ದೇನೆ,” ಎಂದು ಹೇಳಿದ್ದಾರೆ.
ನಂತರ, ಪಾಜಿ (ಯುವರಾಜ್‌ ಸಿಂಗ್‌) ನನ್ನನ್ನು ಮನೆಗೆ ಕರೆದಿದ್ದರು. ಶುಭಮನ್ ಮತ್ತು ನಾನು ಪಾಜಿ ಜೊತೆ ಊಟ ಮಾಡುತ್ತಿದ್ದೆವು. ಪಾಜಿ ನೇರವಾಗಿ ನನಗೆ, ʻನಾನು ನಿನ್ನನ್ನು ರಾಜ್ಯ ತಂಡಕ್ಕೆ ಸಿದ್ಧಪಡಿಸುತ್ತಿಲ್ಲ, ಐಪಿಎಲ್‌ಗೆ ಸಿದ್ಧಪಡಿಸುತ್ತಿಲ್ಲ, ಕೇವಲ ವಿಷಯಗಳನ್ನು ನಿರ್ವಹಿಸಲು ನಾನು ನಿನ್ನನ್ನು ಸಿದ್ಧಪಡಿಸುತ್ತಿಲ್ಲ. ನಾನು ನಿನ್ನನ್ನು ಭಾರತಕ್ಕಾಗಿ ಆಡಲು ಸಿದ್ಧಪಡಿಸುತ್ತಿದ್ದೇನೆ. ನೀವು ಭಾರತದ ಪರ ಪಂದ್ಯಗಳನ್ನು ಗೆಲ್ಲಬೇಕು. ಇದನ್ನು ಬರೆದಿಟ್ಟುಕೊಳ್ಳಿ. ಮುಂದಿನ ಎರಡು ಅಥವಾ ಮೂರು ವರ್ಷಗಳಲ್ಲಿ ನೀವು ಆಡುತ್ತೀರಿʼ ಎಂದು ಹೇಳಿದ್ದರು,” ಎಂಬುದನ್ನು ಅಭಿಷೇಕ್‌ ಶರ್ಮಾ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!