ಉದಯವಾಹಿನಿ, ಕಾಬೂಲ್: ತಾಲಿಬಾನ್‌ ಸರ್ಕಾರದ ಅಫ್ಘಾನ್‌ ವಿದೇಶಾಂಗ ಸಚಿವ ಅಮೀರ್‌ ಖಾನ್‌ ಮುತ್ತಕಿ ಅವರು ಇದೇ ಅ.9 ರಂದು ಭಾರತಕ್ಕೆ ಭೇಟಿ ನೀಡಲಿದ್ದಾರೆ. 2021ರ ಆಗಸ್ಟ್‌ನಲ್ಲಿ ತಾಲಿಬಾನ್ ಅಫ್ಘಾನಿಸ್ತಾನದಲ್ಲಿ ಅಧಿಕಾರ ವಶಪಡಿಸಿಕೊಂಡ ನಂತರ ಭಾರತಕ್ಕೆ ಮೊದಲ ಉನ್ನತ ಮಟ್ಟದ ಭೇಟಿಯಾಗಲಿದೆ. ಇದು ಭಾರತ-ತಾಲಿಬಾನ್ ಸಂಬಂಧದಲ್ಲಿ ಹೊಸ ಅಧ್ಯಾಯಕ್ಕೆ ನಾಂದಿ ಹಾಡಲಿದೆ. ಮುತಾಕಿ ಅವರಿಗೆ ಅಂತರರಾಷ್ಟ್ರೀಯ ಪ್ರಯಾಣ ನಿರ್ಬಂಧಗಳಿಂದ ತಾತ್ಕಾಲಿಕ ವಿನಾಯಿತಿ ನೀಡಲಾಗಿದೆ ಎಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ದೃಢಪಡಿಸಿದೆ. ಇದರಿಂದಾಗಿ ಅವರು ಅ.9 ಮತ್ತು 16 ರ ನಡುವೆ ಭಾರತಕ್ಕೆ ಭೇಟಿ ನೀಡಲು ಅವಕಾಶ ಕಲ್ಪಿಸಲಾಗಿದೆ.
ಭಾರತೀಯ ರಾಜತಾಂತ್ರಿಕ ವಲಯಗಳು ತಿಂಗಳುಗಳಿಂದ ಈ ಕ್ಷಣಕ್ಕಾಗಿ ತಯಾರಿ ನಡೆಸುತ್ತಿವೆ. ಜನವರಿಯಿಂದ, ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಮತ್ತು ಹಿರಿಯ ಐಎಫ್‌ಎಸ್ ಅಧಿಕಾರಿ ಜೆ.ಪಿ. ಸಿಂಗ್ ಸೇರಿದಂತೆ ಭಾರತೀಯ ಅಧಿಕಾರಿಗಳು ಮುತ್ತಕಿ ಮತ್ತು ಇತರ ತಾಲಿಬಾನ್ ನಾಯಕರೊಂದಿಗೆ ಹಲವು ಸುತ್ತಿನ ಮಾತುಕತೆ ನಡೆಸಿದ್ದಾರೆ. ಆಗಾಗ್ಗೆ ದುಬೈನಂತಹ ತಟಸ್ಥ ಸ್ಥಳಗಳಲ್ಲಿ ಭೇಟಿಯಾಗುತ್ತಾರೆ. ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ, ದುಬೈನಲ್ಲಿ ಅಫ್ಘಾನ್ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಕಿ ಅವರನ್ನು ಭೇಟಿಯಾಗಿದ್ದರು. ಭಾರತವು ಅಫ್ಘಾನಿಸ್ತಾನಕ್ಕೆ ನೀಡುತ್ತಿರುವ ಮಾನವೀಯ ನೆರವು, ವಿಶೇಷವಾಗಿ ಆರೋಗ್ಯ ವಲಯವನ್ನು ಬಲಪಡಿಸುವುದು ಮತ್ತು ನಿರಾಶ್ರಿತರ ಪುನರ್ವಸತಿಯನ್ನು ಬೆಂಬಲಿಸುವ ಬಗ್ಗೆ ಚರ್ಚೆ ನಡೆಸಲಾಯಿತು.
ಭಾರತವು ಪಾಕಿಸ್ತಾನದ ವಿರುದ್ಧ ಯಶಸ್ವಿಯಾಗಿ ನಡೆಸಿದ ಆಪರೇಷನ್ ಸಿಂಧೂರ ಕಾರ್ಯಾಚರಣೆಯ ನಂತರ ಮೇ 15 ರಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಮುತ್ತಕಿ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದ್ದರು. ಇದು 2021 ರ ನಂತರದ ಮೊದಲ ಸಚಿವ ಮಟ್ಟದ ಸಂಪರ್ಕವಾಗಿತ್ತು.

Leave a Reply

Your email address will not be published. Required fields are marked *

error: Content is protected !!