ಉದಯವಾಹಿನಿ, ಅಹಮದಾಬಾದ್: ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಮೂರು ಶತಕಗಳ ನೆರವಿನಿಂದ ಭಾರತ 286 ರನ್‌ಗಳ ಭರ್ಜರಿ ಮುನ್ನಡೆ ಸಾಧಿಸಿದೆ. ಮೊದಲ ದಿನ 2 ವಿಕೆಟ್ ನಷ್ಟಕ್ಕೆ 121 ರನ್ ಗಳಿಸಿದ್ದ ಭಾರತ ಇಂದು 327 ರನ್ ಕಲೆ ಹಾಕಿದೆ. ದಿನದ ಅಂತ್ಯಕ್ಕೆ 128 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 448 ರನ್ ಗಳಿಸಿದೆ. 18 ರನ್‌ಗಳಿಸಿದ್ದ ನಾಯಕ ಶುಭಮನ್ ಗಿಲ್ ಇಂದು (50) ರನ್ ಹೊಡೆದರೆ ಕೆಎಲ್ ರಾಹುಲ್ 197 ಎಸೆತಗಳಲ್ಲಿ 12 ಬೌಂಡರಿಗಳ ನೆರವಿನಿಂದ ಶತಕ ಸಿಡಿಸಿ ಔಟಾದರು.
ಧ್ರುವ್ ಜುರೆಲ್ 210 ಎಸೆತಗಳಲ್ಲಿ 15 ಬೌಂಡರಿ, 3 ಸಿಕ್ಸರ್ ಸಿಡಿಸಿ 125 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಧ್ರುವ್ ಜುರೆಲ್ ಮತ್ತು ಜಡೇಜಾ 5ನೇ ವಿಕೆಟಿಗೆ 331 ಎಸೆತಗಳಲ್ಲಿ 206 ರನ್ ಜೊತೆಯಾಟವಾಡಿದ್ದರಿಂದ ಭಾರತ ಬೃಹತ್ ಮುನ್ನಡೆ ಸಾಧಿಸಿದೆ. ವೀಂದ್ರ ಜಡೇಜಾ ಔಟಾಗದೇ 104 ರನ್(176 ಎಸೆತ, 6 ಬೌಂಡರಿ, 5 ಸಿಕ್ಸ್) ಸಿಡಿಸಿದರೆ ವಾಷಿಂಗ್ಟನ್ ಸುಂದರ್ 9 ರನ್‌ಗಳಿಸಿ ಅಜೇಯರಾಗಿ ಉಳಿದರು. ಮೂರು ದಿನಗಳು ಪಂದ್ಯ ಬಾಕಿ ಇದ್ದು ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ ಬೃಹತ್ ಮೊತ್ತ ಕಲೆ ಹಾಕುವ ಸಾಧ್ಯತೆ ಇದೆ.
ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ್ದ ವೆಸ್ಟ್ ಇಂಡೀಸ್ 162 ರನ್ ಗಳಿಸಿ ಮೊದಲ ದಿನವೇ ಆಲೌಟ್ ಆಗಿತ್ತು.
