ಉದಯವಾಹಿನಿ, ನವದೆಹಲಿ: ವೆಸ್ಟ್ ಇಂಡೀಸ್ ವಿರುದ್ಧ ಮೊದಲನೇ ಟೆಸ್ಟ್ ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿ ಭಾರತ ತಂಡದ ಆಲ್‌ರೌಂಡರ್ ರವೀಂದ್ರ ಜಡೇಜಾ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನವನ್ನು ತೋರುವ ಮೂಲಕ ಅರ್ಧಶತಕವನ್ನು ಪೂರ್ಣಗೊಳಿಸಿದರು. ಅವರು ತಮ್ಮ ಅರ್ಧಶತಕದ ಇನಿಂಗ್ಸ್‌ನಲ್ಲಿ ನಾಲ್ಕು ಸಿಕ್ಸರ್‌ಗಳು ಹಾಗೂ ಮೂರು ಬೌಂಡರಿಗಳನ್ನು ಬಾರಿಸಿದರು. ಆ ಮೂಲಕ ಟೆಸ್ಟ್ ಕ್ರಿಕೆಟ್ ಸಿಕ್ಸರ್‌ಗಳ ದಾಖಲೆಯಲ್ಲಿ ಮಾಜಿ ನಾಯಕ ಎಂಎಸ್ ಧೋನಿಯನ್ನು (MS Dhoni) ರವೀಂದ್ರ ಜಡೇಜಾ ಹಿಂದಿಕ್ಕಿದ್ದಾರೆ.
ಅಹಮದಾಬಾದ್‌ನ ನರೇಂದ್ರ ಮೋದಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲನೇ ಟೆಸ್ಟ್ ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿ ಆರನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದ ಉಪ ನಾಯಕ, 109 ಓವರ್‌ಗಳ ವೇಳೆಗೆ 116 ಎಸೆತಗಳಲ್ಲಿ 4 ಬೌಂಡರಿ ಹಾಗೂ 4 ಸಿಕ್ಸರ್‌ಗಳ ಮೂಲಕ ಅಜೇಯ 66 ರನ್‌ಗಳನ್ನು ಗಳಿಸಿದ್ದಾರೆ. ತಮ್ಮ ಈ ಇನಿಂಗ್ಸ್‌ನಲ್ಲಿ ನಾಲ್ಕು ಸಿಕ್ಸರ್‌ಗಳ ಮೂಲಕ ಅವರು ಭಾರತದ ಪರ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಬ್ಯಾಟ್ಸ್‌ಮನ್‌ಗಳ ಸಾಲಿನಲ್ಲಿ ಮಾಜಿ ನಾಯಕ ಹಾಗೂ ವಿಕೆಟ್ ಕೀಪರ್ ಎಂಎಸ್ ಧೋನಿಯನ್ನು ಹಿಂದಿಕ್ಕಿದ್ದಾರೆ.
ನಾಲ್ಕು ಸಿಕ್ಸರ್‌ಗಳ ಮೂಲಕ ರವೀಂದ್ರ ಜಡೇಜಾ ಇದೀಗ 86 ಟೆಸ್ಟ್ ಪಂದ್ಯಗಳಿಂದ 79 ಸಿಕ್ಸರ್‌ಗಳನ್ನು ಸಿಡಿಸಿದಂತಾಗಿದೆ. ಎಂಎಸ್ ಧೋನಿ 90 ಟೆಸ್ಟ್ ಪಂದ್ಯಗಳಿಂದ 78 ಸಿಕ್ಸರ್‌ಗಳನ್ನು ಸಿಡಿಸಿದ್ದಾರೆ. ಇದೀಗ ರವೀಂದ್ರ ಜಡೇಜಾ ಒಂದು ಸಿಕ್ಸರ್ ಜಾಸ್ತಿ ಬಾರಿಸಿದ್ದಾರೆ. 90 ಸಿಕ್ಸರ್‌ಗಳ ಮೂಲಕ ಮಾಜಿ ಆರಂಭಿಕ ವೀರೇಂದ್ರ ಸೆಹ್ವಾಗ್ (103 ಟೆಸ್ಟ್) ಹಾಗೂ ರಿಷಭ್ ಪಂತ್ (47 ಟೆಸ್ಟ್) ಅಗ್ರ ಸ್ಥಾನವನ್ನು ಜಂಟಿಯಾಗಿ ಅಲಂಕರಿಸಿದ್ದಾರೆ. ಮೂರನೇ ಸ್ಥಾನದಲ್ಲಿ ಮಾಜಿ ನಾಯಕ ರೋಹಿತ್ ಶರ್ಮಾ ( 88 ಸಿಕ್ಸರ್, 67 ಟೆಸ್ಟ್) ಇದ್ದಾರೆ.
