ಉದಯವಾಹಿನಿ, ಟಿಬೆಟ್: ವಿಶ್ವದ ಅತಿ ಎತ್ತರದ ಪರ್ವತವಾದ ಎವರೆಸ್ಟ್‌ನಲ್ಲಿ ಹಿಮ ಬಿರುಗಾಳಿ ವಿನಾಶವನ್ನು ಸೃಷ್ಟಿಸಿದೆ. 4,900 ಮೀಟರ್ ಎತ್ತರದಲ್ಲಿರುವ ಹಿಮಭರಿತ ಶಿಖರದಲ್ಲಿ ಸುಮಾರು ಸಾವಿರ ಪರ್ವತಾರೋಹಿಗಳು ಸಿಲುಕಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಅವರನ್ನು ರಕ್ಷಿಸಲು ಸ್ಥಳೀಯರೊಂದಿಗೆ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಟಿಬೆಟ್‌ನಲ್ಲಿ ಸಂಜೆಯಿಂದ ಮೌಂಟ್ ಎವರೆಸ್ಟ್‌ನ ಪೂರ್ವ ಇಳಿಜಾರಿನಲ್ಲಿ ಭಾರಿ ಹಿಮಪಾತವಾಗುತ್ತಿದೆ. ಇದು ಭಾನುವಾರ ಹಿಮ ಬಿರುಗಾಳಿಯಾಗಿ ಮಾರ್ಪಟ್ಟಿದೆ. ಪರಿಣಾಮ ಸುಮಾರು 1000 ಜನರು ಶಿಬಿರಗಳಲ್ಲಿ ಸಿಲುಕಿಕೊಂಡಿದ್ದಾರೆ ಎಂದು ವರದಿಯಾಗಿದೆ. ಅವರನ್ನು ರಕ್ಷಿಸಲು ರಕ್ಷಣಾ ಕಾರ್ಯಾಚರಣೆಗಳನ್ನು ಕೈಗೊಳ್ಳಲಾಗಿದೆ.ಇಲ್ಲಿಯವರೆಗೆ ಸುಮಾರು 350 ಜನರನ್ನು ರಕ್ಷಿಸಿ ಕುಡಾಂಗ್ ಎಂಬ ಸಣ್ಣ ಪಟ್ಟಣಕ್ಕೆ ಸ್ಥಳಾಂತರಿಸಲಾಗಿದೆ. ಬೃಹತ್ ಹಿಮಪಾತಗಳು ಎವರೆಸ್ಟ್‌ಗೆ ಹೋಗುವ ಮಾರ್ಗಗಳನ್ನು ನಿರ್ಬಂಧಿಸಿವೆ. ಇಲ್ಲಿ ಸಿಲುಕಿರುವ ಪರ್ವತಾರೋಹಿಗಳನ್ನು ರಕ್ಷಣೆ ಮಾಡಲು ಅಲ್ಲಿನ ಸ್ಥಳೀಯರೊಂದಿಗೆ ರಕ್ಷಣಾ ಸಿಬ್ಬಂದಿ ಹಗಲಿರುಳು ಶ್ರಮವಹಿಸುತ್ತಿದ್ದಾರೆ. ಮೌಂಟ್ ಎವರೆಸ್ಟ್ ಸಮುದ್ರ ಮಟ್ಟದಿಂದ 8,849 ಮೀಟರ್ ಎತ್ತರದಲ್ಲಿದೆ.
ಕುಡಾಂಗ್ ಪಟ್ಟಣವನ್ನು ತಲುಪಿದ ಚಾರಣ ತಂಡದ ಸದಸ್ಯರೊಬ್ಬರಲ್ಲಾದ ಚೆನ್ ಗೆಶುವಾಂಗ್, ಹವಾಮಾನವು ತುಂಬಾ ತೇವ ಮತ್ತುಶೀತಗಾಳಿಯಂದ ಕೂಡಿದೆ ಎಂದು ಹೇಳಿದ್ದಾರೆ. ಈಗ ಹಿಮಾಲಯದಲ್ಲಿ ಭಾರಿ ಶೀತಪ್ರವಾಹ ಕಂಡು ಬಂದಿರುವುದರಿಂದ ಪರಿಸ್ಥಿತಿ ತುಂಬಾ ಅಪಾಯಕಾರಿಯಾಗಿದೆ ಎಂದು ಅವರು ತಿಳಿಸಿದ್ದಾರೆ. ಎವರೆಸ್ಟ್​ ನಲ್ಲಿ ಈ ವರ್ಷದ ಹವಾಮಾನ ಸಾಮಾನ್ಯವಾಗಿಲ್ಲ ಎಂದು ಅವರು ಹೇಳಿದ್ದಾರೆ. ಅಕ್ಟೋಬರ್ ತಿಂಗಳಲ್ಲಿ ಇಂತಹ ಹವಾಮಾನವನ್ನು ನಾನು ಎಂದಿಗೂ ನೋಡಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ. ಇದೆಲ್ಲವೂ ತುಂಬಾ ಹಠಾತ್ತನೆ ಸಂಭವಿಸಿದೆ ಎಂದೂ ಅವರು ಅಲ್ಲಿನ ಪರಿಸ್ಥಿತಿಗಳ ಬಗ್ಗೆ ಮಾಹಿತಿ ಒದಗಿಸಿದ್ದಾರೆ.

ಸಾಮಾನ್ಯವಾಗಿ ಪರ್ವತಾರೋಹಿಗಳು ಮತ್ತು ಪಾದಯಾತ್ರಿಕರು ಮೌಂಟ್ ಎವರೆಸ್ಟ್ ಏರಲು ಈ ಮಾರ್ಗವನ್ನು ಬಳಸುತ್ತಾರೆ. ಚೀನಾದಲ್ಲಿ ಪ್ರಸ್ತುತ ರಜಾದಿನಗಳಿರುವುದರಿಂದ ಇಲ್ಲಿ ಜನಸಂದಣಿ ಜಾಸ್ತಿಯಾಗಿದೆ ಎನ್ನಲಾಗಿದೆ. ಅದೇ ಸಮಯದಲ್ಲಿ ಅವರೆಲ್ಲರೂ ಹಿಮ ಬಿರುಗಾಳಿಯಿಂದಾಗಿ ಪರ್ವತದ ಮೇಲೆ ಸಿಲುಕಿಕೊಂಡಿದ್ದಾರೆ. ತೀವ್ರ ಚಳಿಯಿಂದಾಗಿ ಪಾದಯಾತ್ರಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೆಲವು ಪಾದಯಾತ್ರಿಕರು ಈಗಾಗಲೇ ಲಘೂಷ್ಣತೆಯಿಂದ ಬಳಲುತ್ತಿದ್ದಾರೆ ಎಂದು ರಕ್ಷಣಾ ತಂಡದ ಸದಸ್ಯರೊಬ್ಬರು ತಿಳಿಸಿದ್ದಾರೆ. ಪ್ರತಿಕೂಲ ಹವಾಮಾನ ಪರಿಸ್ಥಿತಿಗಳ ದೃಷ್ಟಿಯಿಂದ, ಶನಿವಾರದಿಂದ ಎವರೆಸ್ಟ್ ಏರಲು ಅನುಮತಿಗಳನ್ನು ಸ್ಥಗಿತಗೊಳಿಸಲಾಗಿದೆ. ಸಾಮಾನ್ಯವಾಗಿ, ಅಕ್ಟೋಬರ್‌ನಲ್ಲಿ ಈ ಹಿಮಭರಿತ ಪರ್ವತದ ಮೇಲೆ ಪ್ರತಿಕೂಲ ಹವಾಮಾನ ಪರಿಸ್ಥಿತಿಗಳು ಇರುತ್ತವೆ.

Leave a Reply

Your email address will not be published. Required fields are marked *

error: Content is protected !!