ಉದಯವಾಹಿನಿ, ಬೆಂಗಳೂರು: ಪತ್ನಿಗೆ ಮೆಸೇಜ್ ಮಾಡುತ್ತಿದ್ದ ಸ್ನೇಹಿತನ ಕತ್ತು ಕೊಯ್ದು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಬೆಂಗಳೂರಿನ ಕೊಡುಗೇಹಳ್ಳಿ ಮರಿಯಪ್ಪನ ಪಾಳ್ಯದಲ್ಲಿ ನಡೆದಿದೆ.
ಜಾರ್ಖಂಡ್ ಮೂಲದ ರಾಘು ಕೊಲೆಯಾದ ದುರ್ದೈವಿ. ರಾಜು ಕೊಲೆಗೈದ ಆರೋಪಿಯಾಗಿದ್ದಾನೆ. ಇಬ್ಬರೂ ಜಾರ್ಖಂಡ್ ಮೂಲದವರು. ಎರಡು ವರ್ಷಗಳ ಹಿಂದೆ ಇಬ್ಬರೂ ಬೆಂಗಳೂರಿಗೆ ಕೆಲಸ ಅರಸಿ ಬಂದಿದ್ದರು. ಇತ್ತೀಚೆಗೆ ರಾಘು ತನ್ನ ಸ್ನೇಹಿತನ ಹೆಂಡತಿ ಮೇಲೆ ಕಣ್ಣು ಹಾಕಿ, ಮೆಸೇಜ್ ಮಾಡುತ್ತಿದ್ದನಂತೆ. ಈ ವಿಚಾರ ತಿಳಿದ ರಾಜು ಸ್ನೇಹಿತ ರಾಘುವಿಗೆ ತಿಳುವಳಿಕೆ ಹೇಳಿದ್ದನಂತೆ. ಇಷ್ಟಾದರೂ ರಾಘು ಮಾತ್ರ ತನ್ನ ಹಳೆ ಚಾಳಿ ಬಿಡದೇ ಮತ್ತೆ ಸ್ನೇಹಿತನ ಪತ್ನಿಗೆ ಮೆಸೇಜ್ ಮಾಡುವುದನ್ನು ಮುಂದುವರಿಸಿದ್ದನಂತೆ. ಇದರಿಂದ ಕೋಪಗೊಂಡ ರಾಜು ಸೋಮವಾರ ರಾಘು ಜೊತೆ ಗಲಾಟೆ ಮಾಡಿ, ಕತ್ತು ಕೊಯ್ದು ಹತ್ಯೆ ಮಾಡಿದ್ದಾನೆ. ಬಳಿಕ ಆರೋಪಿ ಜಾರ್ಖಂಡ್‌ಗೆ ತೆರಳಲು ಬೈಯ್ಯಪನಹಳ್ಳಿ ರೈಲು ನಿಲ್ದಾಣಕ್ಕೆ ಹೋಗಿದ್ದಾನೆ.
ಕೊಲೆ ವಿಚಾರ ತಿಳಿದ ಪೊಲೀಸರು, ಸ್ಥಳದಲ್ಲಿ ಪರಿಶೀಲನೆ ನಡೆಸಿದಾಗ, ರಾಜುವಿನ ಕೈವಾಡದ ಬಗ್ಗೆ ಶಂಕೆ ವ್ಯಕ್ತವಾಗಿತ್ತು. ತಕ್ಷಣ ಆತನ ಬಗ್ಗೆ ಮಾಹಿತಿ ಪಡೆದು ಪೊಲೀಸರು ಹುಡುಕಾಟ ನಡೆಸಿದ್ದಾರೆ. ಈ ವೇಳೆ ಬೈಯಪ್ಪನಹಳ್ಳಿ ರೈಲು ನಿಲ್ದಾಣದಿಂದ ಜಾರ್ಖಂಡ್‌ಗೆ ರೈಲು ಇರುವ ಮಾಹಿತಿ ತಿಳಿದು, ರೈಲು ನಿಲ್ದಾಣಕ್ಕೆ ಹೋಗಿ ಪರಿಶೀಲನೆ ನಡೆಸಿದಾಗ ಆರೋಪಿ ಪತ್ತೆಯಾಗಿದ್ದಾನೆ. ಆತನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
