ಉದಯವಾಹಿನಿ, ಕೈವ್: ರಷ್ಯಾ ಮಿಲಿಟರಿಯಲ್ಲಿ ಸೇವೆ ಸಲ್ಲಿಸುತ್ತಿದ್ದ ಭಾರತ ಮೂಲದ ಸೈನಿಕ ಉಕ್ರೇನ್ ಮುಂದೆ ಶರಣಾಗಿದ್ದಾರೆ ಎಂದು ಉಕ್ರೇನ್ ಸೇನೆ ತಿಳಿಸಿದೆ. ಉಕ್ರೇನಿಯನ್ ಮಿಲಿಟರಿ ತನ್ನ ಟೆಲಿಗ್ರಾಮ್ ಚಾನೆಲ್‌ನಲ್ಲಿ ಈ ವೀಡಿಯೋವನ್ನು ಬಿಡುಗಡೆ ಮಾಡಿದೆ.
ಗುಜರಾತ್‌ನ 22 ವರ್ಷದ ಮಜೋತಿ ಸಾಹಿಲ್ ಮೊಹಮ್ಮದ್ ಹುಸೇನ್ ಉಕ್ರೇನ್ ಪಡೆ ಮುಂದೆ ಶರಣಾದ ಸೈನಿಕ. ಈ ವಿಷಯದ ಬಗ್ಗೆ ಭಾರತೀಯ ಅಧಿಕಾರಿಗಳು ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಕೈವ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ವರದಿಯ ಸತ್ಯಾಸತ್ಯತೆಯನ್ನು ಪರಿಶೀಲಿಸುತ್ತಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಇದುವರೆಗೆ ಉಕ್ರೇನ್ ಅಧಿಕಾರಿಗಳಿಂದ ಯಾವುದೇ ಔಪಚಾರಿಕ ಮಾಹಿತಿ ಬಂದಿಲ್ಲ ಎಂದು ವರದಿಗಳು ತಿಳಿಸಿವೆ.
ಹುಸೇನ್ ಹೆಚ್ಚಿನ ಅಧ್ಯಯನಕ್ಕೆಂದು ರಷ್ಯಾಗೆ ಹೋಗಿದ್ದರು. ಅಲ್ಲಿ ಮಾದಕವಸ್ತು ಸಂಬಂಧಿತ ಪ್ರಕರಣದಲ್ಲಿ ಸಿಲುಕಿ 7 ವರ್ಷಗಳ ಶಿಕ್ಷೆಯನ್ನು ವಿಧಿಸಲಾಯಿತು. ಜೈಲು ಶಿಕ್ಷೆ ತಪ್ಪಿಸಲು ರಷ್ಯಾದ ಮಿಲಿಟರಿ ಒಪ್ಪಂದಕ್ಕೆ ಸಹಿ ಹಾಕುವ ಅವಕಾಶವನ್ನು ಹುಸೇನ್‌ಗೆ ನೀಡಲಾಯಿತು.
ನನಗೆ ಜೈಲಿನಲ್ಲಿರಲು ಇಷ್ಟವಿರಲಿಲ್ಲ, ಆದ್ದರಿಂದ ನಾನು ವಿಶೇಷ ಮಿಲಿಟರಿ ಕಾರ್ಯಾಚರಣೆಗಾಗಿ ಒಪ್ಪಂದಕ್ಕೆ ಸಹಿ ಹಾಕಿದೆ. ಆದರೆ ನಾನು ಅಲ್ಲಿಂದ ಹೊರಬರಲು ಬಯಸಿದ್ದೆ ಎಂದು ಹುಸೇನ್ ಹೇಳಿದ್ದಾರೆ. ಕೇವಲ 16 ದಿನಗಳ ತರಬೇತಿಯ ನಂತರ, ನನ್ನನ್ನು ಅಕ್ಟೋಬರ್ 1 ರಂದು ಮೂರು ದಿನಗಳ ಕಾಲ ನಡೆದ ಮೊದಲ ಯುದ್ಧ ಕಾರ್ಯಾಚರಣೆಗೆ ಕಳುಹಿಸಲಾಯಿತು. ತಮ್ಮ ಕಮಾಂಡರ್ ಜೊತೆಗಿನ ಘರ್ಷಣೆಯ ನಂತರ ಉಕ್ರೇನ್ ಸೇನೆ ಮುಂದೆ ಶರಣಾಗಲು ನಿರ್ಧರಿಸಿದೆ ಎಂದು ಹುಸೇನ್ ವೀಡಿಯೋದಲ್ಲಿ ವಿವರಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!