ಉದಯವಾಹಿನಿ, ವಾಷಿಂಗ್ಟನ್ : ಆಪರೇಷನ್ ಸಿಂಧೂರ್ ಬಳಿಕ ಅಮೆರಿಕ ಹಾಗೂ ಪಾಕಿಸ್ತಾನ ತೀರಾ ಹತ್ತಿರವಾಗಿವೆ. ಎರಡೂ ದೇಶಗಳ ನಡುವಿನ ಕ್ಷಿಪಣಿ ರಕ್ಷಣಾ ಒಪ್ಪಂದದಿಂದ ಇದಕ್ಕೆ ಹೊಸ ಪುರಾವೆ ಸಿಕ್ಕಂತಾಗಿದೆ. ಪಾಕ್ ಹಾಗೂ ಅಮೆರಿಕದ ನಡುವೆ ರಹಸ್ಯ ಒಪ್ಪಂದ ನಡೆದಿದೆ. ಪಾಕಿಸ್ತಾನವು ಅಮೆರಿಕದಿಂದ AIM-120 ಅಡ್ವಾನ್ಸ್ಡ್ ಮೀಡಿಯಂ-ರೇಂಜ್ ಏರ್-ಟು-ಏರ್ ಕ್ಷಿಪಣಿಗಳನ್ನು ಪಡೆಯುವ ಸಾಧ್ಯತೆಯಿದೆ. ಅಮೆರಿಕ ಯುದ್ಧ ಇಲಾಖೆಯು ಇತ್ತೀಚಿಗೆ ಮಾಡಿಕೊಂಡಿರುವ ಕೆಲವು ಒಪ್ಪಂದದಲ್ಲಿ ಪಾಕಿಸ್ತಾನವೂ ಸೇರಿದೆ.
ಈ ಒಪ್ಪಂದವು ಬ್ರಿಟನ್, ಪೋಲೆಂಡ್, ಪಾಕಿಸ್ತಾನ, ಜರ್ಮನಿ, ಫಿನ್ಲ್ಯಾಂಡ್, ಆಸ್ಟ್ರೇಲಿಯಾ, ರೊಮೇನಿಯಾ, ಕತಾರ್, ಓಮನ್, ಕೊರಿಯಾ, ಗ್ರೀಸ್, ಸ್ವಿಟ್ಜರ್ಲೆಂಡ್, ಪೋರ್ಚುಗಲ್, ಸಿಂಗಾಪುರ, ನೆದರ್ಲ್ಯಾಂಡ್ಸ್, ಜೆಕ್ ಗಣರಾಜ್ಯ, ಜಪಾನ್, ಸ್ಲೋವಾಕಿಯಾ, ಡೆನ್ಮಾರ್ಕ್, ಕೆನಡಾ, ಬೆಲ್ಜಿಯಂ, ಬಹ್ರೇನ್, ಸೌದಿ ಅರೇಬಿಯಾ, ಇಟಲಿ, ನಾರ್ವೆ, ಸ್ಪೇನ್, ಕುವೈತ್, ಫಿನ್ಲ್ಯಾಂಡ್, ಸ್ವೀಡನ್, ತೈವಾನ್, ಲಿಥುವೇನಿಯಾ, ಇಸ್ರೇಲ್, ಬಲ್ಗೇರಿಯಾ, ಹಂಗೇರಿ ಮತ್ತು ಟರ್ಕಿಗಳಿಗೆ ವಿದೇಶಿ ಮಿಲಿಟರಿ ಶಸ್ತ್ರಾಸ್ತ್ರಗಳ ಮಾರಾಟ ಕೂಡ ಒಳಗೊಂಡಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಪಾಕಿಸ್ತಾನಿ ಪ್ರಧಾನಿ ಶೆಹಬಾಜ್ ಷರೀಫ್ ಮತ್ತು ಸೇನಾ ಮುಖ್ಯಸ್ಥ ಜನರಲ್ ಆಸಿಮ್ ಮುನೀರ್ ನಡುವಿನ ಸಭೆಯ ಕೆಲವೇ ದಿನಗಳ ನಂತರ ಈ ಒಪ್ಪಂದವಾಗಿದೆ. ಭೇಟಿಯ ಸಮಯದಲ್ಲಿ, ಭಾರತ ಮತ್ತು ಪಾಕಿಸ್ತಾನದ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯನ್ನು ಕಡಿಮೆ ಮಾಡುವಲ್ಲಿ ತಾವು ಪಾತ್ರ ವಹಿಸಿರುವುದಾಗಿ ಟ್ರಂಪ್ ಹೇಳಿದ್ದಾರೆ.
