ಉದಯವಾಹಿನಿ, ಮುಂಬೈ: ಕಾಂಗ್ರೆಸ್ ಪಕ್ಷವು ಉಗ್ರರ ಬಗ್ಗೆ ಮೃದು ಧೋರಣೆ ಹೊಂದಿದೆ. ಕಾಂಗ್ರೆಸ್‌ನ ದೌರ್ಬಲ್ಯಗಳೇ ಉಗ್ರರನ್ನ ಬಲಪಡಿಸಿತು. ಆದ್ರೆ ಇಂದಿನ ಭಾರತ ಶತ್ರುಗಳ ಮನೆಗಳಿಗೇ ನುಗ್ಗಿ ಹೊಡೆಯುತ್ತೆ ಎಂದು ಪ್ರಧಾನಿ ನರೇಂದ್ರ ಮೋದಿ ಗುಡುಗಿದರು.
ನವಿ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಹಂತ-1 ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಪ್ರಧಾನಿ, 26/11 ದಾಳಿ (2008 Mumbai Attack) ವೇಳೆ ಜಾಗತಿಕ ಒತ್ತಡವಿತ್ತು ಎಂದಿದ್ದ ಪಿ.ಚಿದಂಬರಂ ಹೇಳಿಕೆಗೆ ತಿರುಗೇಟು ಕೊಟ್ಟರು. ಅಲ್ಲದೇ ತಮ್ಮ ಮೇಲೆ ಒತ್ತಡ ಹಾಕಿದ್ದ ದೇಶ ಯಾವುದು ಎಂದು ಕಾಂಗ್ರೆಸ್ ಬಹಿರಂಗಪಡಿಸಲಿ ಎಂದು ಬಹಿರಂಗವಾಗಿಯೇ ಸವಾಲೆಸೆದರು.
2008ರ ಮುಂಬೈ ಭಯೋತ್ಪಾದಕ ದಾಳಿಯ ಬಳಿಕ ಕಾಂಗ್ರೆಸ್ ಪಕ್ಷ ತನ್ನ ದೌರ್ಬಲ್ಯವನ್ನು ತೋರಿಸಿತು. ಅಂದಿನ ರಾಜಕೀಯ ನಿರ್ಧಾರಗಳೂ ಸಹ ಬೇರೆ ದೇಶದ ಒತ್ತಡದಿಂದ ಪ್ರಭಾವಿತವಾಗಿತ್ತು ಎಂದು ಮೋದಿ ವಾಗ್ದಾಳಿ ನಡೆಸಿದರು. ಮುಂಬೈ ಭಾರತದ ಆರ್ಥಿಕ ರಾಜಧಾನಿ ಮಾತ್ರವಲ್ಲ, ಅತ್ಯಂತ ಕ್ರಿಯಾಶೀಲ ನಗರಗಳಲ್ಲಿ ಒಂದಾಗಿದೆ. ಅದಕ್ಕಾಗಿಯೇ 2008ರಲ್ಲಿ ಉಗ್ರರು ಮುಂಬೈ ಅನ್ನು ಗುರಿಯಾಗಿಸಿಕೊಂಡರು. ಆದ್ರೆ ಅಂದಿನ ಕಾಂಗ್ರೆಸ್ ತನ್ನ ದೌರ್ಬಲ್ಯವನ್ನ ತೋರಿಸಿತು ಎಂದು ಕಿಡಿ ಕಾರಿದರು.
