ಉದಯವಾಹಿನಿ, ಮುಂಬೈ: ಪರಾರಿಯಾದ ಆರ್ಥಿಕ ಅಪರಾಧಿ ಎನ್ನುವ ಘೋಷಣೆ ಮತ್ತು 2018ರ ಕಾಯ್ದೆಯ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಉದ್ಯಮಿ ವಿಜಯ್ ಮಲ್ಯ ಅವರು ಬಾಂಬೆ ಹೈಕೋರ್ಟ್‌ಗೆ ಎರಡು ಅರ್ಜಿಗಳನ್ನು ಸಲ್ಲಿಸಿದ್ದಾರೆ. ಇದರ ವಿಚಾರಣೆ ನಡೆಸಿದ ನ್ಯಾಯಾಲಯವು  ಭಾರತಕ್ಕೆ ಯಾವಾಗ ಮರಳುವ ಉದ್ದೇಶವಿದೆ ಎಂದು ಪ್ರಶ್ನಿಸಿದೆ. ಬಹು ಸಾಲ ಮರುಪಾವತಿ ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ 2016ರಿಂದ ವಿಜಯ್ ಮಲ್ಯ ಯುಕೆಯಲ್ಲಿ ನೆಲೆಸಿದ್ದಾರೆ.

ಪರಾರಿಯಾದ ಆರ್ಥಿಕ ಅಪರಾಧಿಗಳ ಕಾಯ್ದೆಯ ವಿರುದ್ಧದ ವಿಜಯ್ ಮಲ್ಯ ಅವರು ಹೈಕೋರ್ಟ್ ವ್ಯಾಪ್ತಿಗೆ ಸಲ್ಲಿಸದ ಅರ್ಜಿಯನ್ನು ಆಲಿಸಲಾಗುವುದಿಲ್ಲ ಎಂದಿರುವ ಬಾಂಬೆ ಹೈಕೋರ್ಟ್, ಅವರು ಭಾರತಕ್ಕೆ ಮರಳಲು ಉದ್ದೇಶಿಸಿರುವುದು ಯಾವಾಗ ಎಂದು ಅವರ ವಕೀಲರನ್ನು ಪ್ರಶ್ನಿಸಿದೆ. ವಿಜಯ್ ಮಲ್ಯ ಅವರು ಮೊದಲು ನ್ಯಾಯಾಲಯಕ್ಕೆ ಹಾಜರಾಗಬೇಕು. ಬಳಿಕ ಕಾಯ್ದೆಯ ವಿರುದ್ಧ ಅವರು ಸಲ್ಲಿಸಿರುವ ಅರ್ಜಿಯನ್ನು ವಿಚಾರಣೆ ನಡೆಸಬಹುದು ಎಂದು ಮುಖ್ಯ ನ್ಯಾಯಮೂರ್ತಿ ಚಂದ್ರಶೇಖರ್ ಮತ್ತು ನ್ಯಾಯಮೂರ್ತಿ ಗೌತಮ್ ಅನ್ಖಡ್ ಅವರ ಪೀಠವು ವಿಜಯ್ ಮಲ್ಯ ಪರವಾಗಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿರುವ ವಕೀಲ ಅಮಿತ್ ದೇಸಾಯಿ ಅವರಿಗೆ ತಿಳಿಸಿದೆ.ದೇಶದ ನ್ಯಾಯಾಲಯಗಳಿಗೆ ಹಾಜರಾಗದೆ ಕಾಯ್ದೆಯ ಸಿಂಧುತ್ವವನ್ನು ಪ್ರಶ್ನಿಸಲು ಪರಾರಿಯಾದವರಿಗೆ ಅವಕಾಶ ನೀಡಬಾರದು ಎಂದು ಜಾರಿ ನಿರ್ದೇಶನಾಲಯ ಪರವಾಗಿ ನ್ಯಾಯಾಲಯಕ್ಕೆ ಹಾಜರಾಗಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ತಿಳಿಸಿದ್ದಾರೆ.ಪರಾರಿಯಾದ ಆರೋಪಿಗಳು ದೇಶದಿಂದ ದೂರ ಉಳಿದು ತಮ್ಮ ವಕೀಲರ ಮೂಲಕ ಅರ್ಜಿಗಳನ್ನು ಸಲ್ಲಿಸಿ ಕಾನೂನನ್ನು ದುರುಪಯೋಗಪಡಿಸಿಕೊಳ್ಳದಂತೆ ನೋಡಿಕೊಳ್ಳಲು ಎಫ್ಇಒ ಕಾಯ್ದೆಯನ್ನು ಜಾರಿಗೆ ತರಲಾಗಿದೆ. ಮಲ್ಯ ಅವರ ಹಸ್ತಾಂತರ ಪ್ರಕ್ರಿಯೆಗಳು ನಡೆಯುತ್ತಿದೆ ಎಂದು ಮೆಹ್ತಾ ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!