ಉದಯವಾಹಿನಿ, ತಿರುವನಂಪುರಂ: ರೇಣುಕಾ ಸಿಂಗ್‌ (21ಕ್ಕೆ 4) ಹಾಗೂ ದೀಪ್ತಿ ಶರ್ಮಾ (18 ಕ್ಕೆ 3) ಅವರ ಪರಿಣಾಮಕಾರಿ ಬೌಲಿಂಗ್‌ ಹಾಗೂ ಶಫಾಲಿ ವರ್ಮಾ ) ದಾಳಿಯ ಸಹಾಯದಿಂದ ಭಾರತ ಮಹಿಳಾ ತಂಡ, ಮೂರನೇ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ 8 ವಿಕೆಟ್‌ಗಳ ಭರ್ಜರಿ ಗೆಲುವು ಪಡೆಯಿತು. ಆ ಮೂಲಕ ಇನ್ನೂ ಎರಡು ಪಂದ್ಯಗಳು ಬಾಕಿ ಇರುವಾಗಲೇ ಹರ್ಮನ್‌ಪೀತ್‌ ಕೌರ್‌ ನಾಯಕತ್ವದ ಭಾರತ ತಂಡ ಟಿ20ಐ ಸರಣಿಯನ್ನು 3-0 ಅಂತರದಲ್ಲಿ ವಶಪಡಿಸಿಕೊಂಡಿತು. ಆದರೆ, ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದ ಶ್ರೀಲಂಕಾ ತಂಡ ಮೂರನೇ ಪಂದ್ಯದಲ್ಲಿಯೂ ಸೋಲುವ ಮೂಲಕ ಸರಣಿಯನ್ನು ಕಳೆದುಕೊಂಡಿತು.

ಗ್ರೀನ್‌ ಫೀಲ್ಡ್‌ ಇಂಟರ್‌ನ್ಯಾಷನಲ್‌ ಕ್ರೀಡಾಂಗಣದಲ್ಲಿ ನಡೆದಿದ್ದ ಮೂರನೇ ಪಂದ್ಯದಲ್ಲಿ ಶ್ರೀಲಂಕಾ ನೀಡಿದ್ದ 113 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಭಾರತ ಮಹಿಳಾ ತಂಡ, ಶಫಾಲಿ ವರ್ಮಾ (79) ಅವರ ಸ್ಪೋಟಕ ಬ್ಯಾಟಿಂಗ್‌ ಸಹಾಯದಿಂದ 13.2 ಓವರ್‌ಗಳಿಗೆ ಎರಡು ವಿಕೆಟ್‌ ನಷ್ಟಕ್ಕೆ 115 ರನ್‌ಗಳನ್ನು ಕಲೆ ಹಾಕಿ ಎಂಟು ವಿಕೆಟ್‌ಗಳಿಂದ ಗೆದ್ದು ಬೀಗಿತು. ಸ್ಮೃತಿ ಮಂಧಾನಾ (1 ) ಹಾಗೂ ಜೆಮಿಮಾ ರೊಡ್ರಿಗಸ್‌ (9) ಅವರು ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದರು. ಆದರೆ, ಒಂದು ತುದಿಯಲ್ಲಿ ಸ್ಪೋಟಕ ಬ್ಯಾಟ್‌ ಮಾಡಿದ ಶಫಾಲಿ ವರ್ಮಾ ಕೇವಲ 42 ಎಸೆತಗಳಲ್ಲಿ ಮೂರು ಸಿಕ್ಸರ್‌ ಹಾಗೂ 11 ಬೌಂಡರಿಗಳೊಂದಿಗೆ ಅಜೇಯ 79 ರನ್‌ಗಳನ್ನು ಸಿಡಿಸಿದರು. ಕೊನೆಯಲ್ಲಿ ನಾಯಕಿ ಹರ್ಮನ್‌ಪ್ರೀತ್‌ ಕೌರ್‌ ಅಜೇಯ 21 ರನ್‌ಗಳನ್ನು ಗಳಿಸಿದರು.

ಇದಕ್ಕೂ ಮುನ್ನ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾಗಿದ್ದ ಶ್ರೀಲಂಕಾ ತಂಡ, ಬ್ಯಾಟಿಂಗ್‌ ವೈಫಲ್ಯ ಅನುಭವಿಸಿತು. ರೇಣುಕಾ ಸಿಂಗ್‌ ಮಾರಕ ಬೌಲಿಂಗ್‌ ದಾಳಿ ಹಾಗೂ ದೀಪ್ತಿ ಶರ್ಮಾ ಸ್ಪಿನ್‌ ಮೋಡಿಗೆ ನಲುಗಿತು. ಆ ಮೂಲಕ ತನ್ನ ಪಾಲಿನ 20 ಓವರ್‌ಗಳನ್ನು ಪೂರ್ಣಗೊಳಿಸಿದರೂ 7 ವಿಕೆಟ್‌ಗಳ ನಷ್ಟಕ್ಕೆ 112 ರನ್‌ಗಳಿಗೆ ಶಕ್ತವಾಯಿತು. ಇದರೊಂದಿಗೆ ಎದುರಾಳಿ ಭಾರತ ತಂಡಕ್ಕೆ 113 ರನ್‌ಗಳ ಗುರಿಯನ್ನು ನೀಡಿತ್ತು. ಶ್ರೀಲಂಕಾ ತಂಡದ ಪರ ಹಾಸೀನಾ ಪೆರೆರಾ 25 ರನ್‌, ಇಮೇಶಾ ದುಲಾನಿ 27 ಹಾಗೂ ಕಾವೇಶ್‌ ದಿಲ್ಹಾರಿ 20 ರನ್‌ ಗಳಿಸಿದರು. ಇವರನ್ನು ಹೊರತುಪಡಿಸಿ ಇನ್ನುಳಿದ ಯಾವುದೇ ಆಟಗಾರ್ತಿಯರು 20ರ ಗಡಿ ದಾಟಲಿಲ್ಲ. ಭಾರತದ ಪರ ಮಾರಕ ಬೌಲಿಂಗ್‌ ದಾಳಿ ನಡೆಸಿದ ರೇಣುಕಾ ಸಿಂಗ್‌ 4 ಓವರ್‌ಗಳಿಗೆ 21 ರನ್‌ ನೀಡಿ 4 ವಿಕೆಟ್‌ ಕಿತ್ತರು. ಇನ್ನು ಇವರಿಗೆ ಸಾಥ್‌ ನೀಡಿದ ದೀಪ್ತಿ ಶರ್ಮಾ ಬೌಲ್‌ ಮಾಡಿದ ನಾಲ್ಕು ಓವರ್‌ಗಳಿಗೆ 18 ರನ್‌ ನೀಡಿ ಮೂರು ವಿಕೆಟ್‌ಗಳನ್ನು ತೆಗೆದುಕೊಂಡರು.

Leave a Reply

Your email address will not be published. Required fields are marked *

error: Content is protected !!