ಉದಯವಾಹಿನಿ,ಬೆಂಗಳೂರ: ಇತ್ತೀಚಿನ ಜಾಗತಿಕ ಚಂದ್ರ ಅನ್ವೇಷಣಾ ಯೋಜನೆಗಳು ಯಶಸ್ಸು ಮತ್ತು ವೈಫಲ್ಯ ಎರಡನ್ನೂ ಅನುಭವಿಸಿವೆ. ಚೀನಾ ಚಂದ್ರನ ಮೇಲೆ ಯಶಸ್ವಿಯಾಗಿ ಇಳಿಯುವಲ್ಲಿ ಸಫಲವಾದರೆ, ಭಾರತ ಮತ್ತು ಎರಡು ಖಾಸಗಿ ಕಂಪನಿಗಳ ಯೋಜನೆಗಳು ವೈಫಲ್ಯ ಅನುಭವಿಸಿವೆ. ಈ ಘಟನೆಗಳಿಂದಾಗಿ ಚಂದ್ರನ ಮೇಲೆ ಸುರಕ್ಷಿತವಾಗಿ ಇಳಿಯಲು ಇನ್ನೂ ಹಲವು ಸವಾಲುಗಳನ್ನು ಎದುರಿಸಬೇಕಿದೆ ಎಂದು ತಿಳಿದು ಬರುತ್ತದೆ. ಐ ಸ್ಪೇಸ್ ಸಂಸ್ಥೆಯ ಹಕುಟೊ-ಆರ್ ಯೋಜನೆ ಎಪ್ರಿಲ್ 25, 2023ರಂದು ಚಂದ್ರನ ಮೇಲ್ಮೈಯಲ್ಲಿ ಪತನ ಹೊಂದಿತು. ಆದರೂ, 2023ರ ತೀಯಾರ್ಧದಲ್ಲಿ ಚಂದ್ರನ ಮೇಲ್ಮೈಯಲ್ಲಿ ಸಾಫ್ಟ್ ಲ್ಯಾಂಡಿಂಗ್ ನಡೆಸಲು ಕಾಯುತ್ತಿರುವ ಹಲವು ಯೋಜನೆಗಳು ಜಾರಿಗೆ ಬರಲಿವೆ. ಖಾಸಗಿ ಹಾಗೂ ಸರ್ಕಾರಿ ಸಂಸ್ಥೆಗಳೂ ಈ ಯೋಜನೆಗಳನ್ನು ಕೈಗೆತ್ತಿಕೊಳ್ಳುತ್ತಿದ್ದು, ಚಂದ್ರನ ಅನ್ವೇಷಣೆಯೆಡೆಗಿನ ಹೊಸ ಬದ್ಧತೆ ಮತ್ತು ನೂತನ ವೈಜ್ಞಾನಿಕ ಆವಿಷ್ಕಾರಗಳ ಸಾಧ್ಯತೆಗಳನ್ನು ಸಾರುತ್ತಿವೆ.
ಭಾರತ ತನ್ನ ಮೂರನೇ ಚಂದ್ರ ಅನ್ವೇಷಣಾ ಯೋಜನೆಯಾದ ಚಂದ್ರಯಾನ – 3 ಯೋಜನೆಯನ್ನು ಜುಲೈ 13, ಗುರುವಾರದಂದು ಮಧ್ಯಾಹ್ನ 2:30ಕ್ಕೆ ಉಡಾವಣೆಗೊಳಿಸಲು ನಿರ್ಧರಿಸಿದೆ. ಭಾರತದ ಈ ಹಿಂದಿನ ಚಂದ್ರನ ಮೇಲಿಳಿಯುವ ಯೋಜನೆಯಾದ ಚಂದ್ರಯಾನ 2ಕ್ಕೆ, 2019ರಲ್ಲಿ ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲ್ಮೈಗೆ ಇಳಿಯುವ ಸಂದರ್ಭದಲ್ಲಿ ಪತನ ಹೊಂದಿದ್ದರಿಂದ ಹಿನ್ನಡೆ ಉಂಟಾಯಿತು. ಆದರೆ ಭಾರತ ತನ್ನ ಚಂದ್ರ ಅನ್ವೇಷಣಾ ಯೋಜನೆಗಳಲ್ಲಿ ಯಶಸ್ವಿಯಾಗುವ ಛಲ ಹೊಂದಿದ್ದು, ಆ ನಿಟ್ಟಿನಲ್ಲಿ ಚಂದ್ರಯಾನ 3 ಒಂದು ಮಹತ್ವದ ಹೆಜ್ಜೆಯಾಗಿದೆ.
