ಉದಯವಾಹಿನಿ, ಜೈಪುರ್: ಪಾಕಿಸ್ತಾನದ ಐಎಸ್‌ಐ ಪರವಾಗಿ ಬೇಹುಗಾರಿಕೆ ನಡೆಸುತ್ತಿದ್ದ ಆರೋಪದ ಮೇಲೆ ರಾಜಸ್ಥಾನ ಗುಪ್ತಚರ ಇಲಾಖೆ ಅಧಿಕಾರಿಗಳು ಅಲ್ವಾರ್‌ನ ಗೋವಿಂದಗಢ ನಿವಾಸಿಯೊಬ್ಬನನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಮಂಗತ್ ಸಿಂಗ್ (32) ಎಂದು ಗುರುತಿಸಲಾಗಿದೆ. ಅಲ್ವಾರ್‌ನ ಕಂಟೋನ್ಮೆಂಟ್ ಪ್ರದೇಶದ ಕಣ್ಗಾವಲು ಸಮಯದಲ್ಲಿ ಮಂಗತ್ ಸಿಂಗ್ ಬೇಹುಗಾರಿಕೆಯಲ್ಲಿ ತೊಡಗಿರುವುದು ಗೊತ್ತಾಗಿತ್ತು. ಬಳಿಕ ಅಧಿಕಾರಿಗಳು ವಿಚಾರಣೆ ನಡೆಸಿದಾಗ, ಆರೋಪಿ ಪಾಕ್‌ ಸಂಪರ್ಕದಲ್ಲಿರುವುದು ತಿಳಿದು ಬಂದಿದೆ. 1923ರ ಅಧಿಕೃತ ರಹಸ್ಯ ಕಾಯ್ದೆಯ ಅಡಿಯಲ್ಲಿ ಆರೋಪಿಯನ್ನು ಬಂಧಿಸಲಾಗಿದೆ.
ತನಿಖೆಯ ಸಮಯದಲ್ಲಿ ಇಶಾ ಶರ್ಮಾ ಎಂಬ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪಾಕಿಸ್ತಾನದ ಮಹಿಳಾ ಹ್ಯಾಂಡ್ಲರ್, ಆರೋಪಿಯನ್ನು ಹನಿಟ್ರ್ಯಾಪ್ ಮಾಡಿದ್ದಳು ಎಂದು ತಿಳಿದುಬಂದಿದೆ. ಬೇಹುಗಾರಿಕೆ ಚಟುವಟಿಕೆಗಳಲ್ಲಿ ಸಹಕರಿಸಿದ್ದಕ್ಕಾಗಿ ಪಾಕ್ ಹ್ಯಾಂಡ್ಲರ್ ಸಿಂಗ್‌ಗೆ ಹಣಕಾಸಿನ ನೆರವು ನೀಡಿದ್ದಳು ಎಂಬುದು ತಿಳಿದು ಬಂದಿದೆ.
ಹಣಕ್ಕಾಗಿ ಆರೋಪಿ ಭಾರತದ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಸೂಕ್ಷ್ಮ ಮಾಹಿತಿಯನ್ನು ನೀಡಿದ್ದಾನೆ. ಈತ ಕಳೆದ ಎರಡು ವರ್ಷಗಳಿಂದ ಸಾಮಾಜಿಕ ಮಾಧ್ಯಮಗಳ ಮೂಲಕ ಪಾಕಿಸ್ತಾನದ ಗುಪ್ತಚರ ಕಾರ್ಯಕರ್ತರೊಂದಿಗೆ ಸಂಪರ್ಕದಲ್ಲಿದ್ದ ಎಂದು ಪೊಲೀಸರು ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!