ಉದಯವಾಹಿನಿ, ವಡಿ ಗಾಜಾ: ಇಸ್ರೇಲ್ ಮತ್ತು ಹಮಾಸ್ ಕದನ ವಿರಾಮ ಒಪ್ಪಂದಕ್ಕೆ ಸಮ್ಮತಿಸಿವೆ. ಈ ಮೂಲಕ ಎರಡು ವರ್ಷದ ಯುದ್ಧ ಅಂತ್ಯಕಂಡಿದೆ. ಇನ್ನು ಯುದ್ಧ ಆತಂಕದ ಹಿನ್ನೆಲೆ ಮನೆ ತೊರೆದು ಸ್ಥಳಾಂತರಗೊಂಡಿದ್ದ 10 ಸಾವಿರಕ್ಕೂ ಹೆಚ್ಚು ಪ್ಯಾಲೆಸ್ಟೀನಿಯನ್ನರು ಇದೀಗ ಗಾಜಾಕ್ಕೆ ಮರಳುತ್ತಿದ್ದಾರೆ.
ಶಾಂತಿ ಒಪ್ಪಂದದಂತೆ ಗಾಜಾದಿಂದ ಇಸ್ರೇಲ್ ತನ್ನ ಸೇನಾ ಪಡೆಯನ್ನು ವಾಪಸ್ ಕರೆಸಿಕೊಳ್ಳುತ್ತಿದೆ. ಆದರೆ ಒಪ್ಪಂದಲ್ಲಿ ಗಾಜಾ ಆಡಳಿತ ಯಾರು ನಿರ್ವಹಿಸಲಿದ್ದಾರೆ ಮತ್ತು ಹಮಾಸ್ ಶಸ್ತ್ರಾಸ್ತ್ರ ತ್ಯಜಿಸಲಿದೆಯೇ ಎಂಬುದು ಸ್ಪಷ್ಟವಾಗಿಲ್ಲ.ಮಾರ್ಚ್‌ನಲ್ಲಿ ಕದನ ವಿರಾಮವನ್ನು ಏಕಪಕ್ಷೀಯವಾಗಿ ಕೊನೆಗೊಳಿಸಿದ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಹಮಾಸ್ ತನ್ನ ಶಸ್ತ್ರಾಸ್ತ್ರಗಳನ್ನು ತ್ಯಜಿಸದಿದ್ದರೆ ಇಸ್ರೇಲ್ ತನ್ನ ದಾಳಿಯನ್ನು ಮುಂದುವರೆಸಲಿದೆ ಎಂದು ಸುಳಿವು ನೀಡಿದ್ದರು.ಹಮಾಸ್ ನಡೆಸಿದ ಭೀಕರ ದಾಳಿಯಿಂದ ಎರಡು ವರ್ಷಗಳ ಕಾಲ ನಡೆದ ಯುದ್ಧ ನಿಲ್ಲಿಸಲು ಹಮಾಸ್ ಮತ್ತು ಇಸ್ರೇಲ್ ಒಪ್ಪಿಗೆ ನೀಡಿವೆ. ಶುಕ್ರವಾರದಿಂದ ಈ ಕದನ ವಿರಾಮ ಆರಂಭವಾಗಿದೆ. ಸೋಮವಾರ ಒತ್ತೆಯಾಳುಗಳು ಬಿಡುಗಡೆಯಾಗಲಿದ್ದಾರೆ. ಶುಕ್ರವಾರದಿಂದ ಗಾಜಾದ ಕೆಲವು ಭಾಗಗಳಲ್ಲಿ ಭಾರೀ ಶೆಲ್ ದಾಳಿಗಳು ನಿಂತಿದೆ ಎಂದು ಪ್ಯಾಲೆಸ್ಟೀನಿಯನ್ನರು ತಿಳಿಸಿದ್ದಾರೆ.ಎರಡು ವರ್ಷಗಳ ಕಾಲ ನಡೆದ ಈ ಯುದ್ದಲ್ಲಿ ಸುಮಾರು 2 ಮಿಲಿಯನ್ ಜನಸಂಖ್ಯೆ ಹೊಂದಿರುವ ಗಾಜಾಪಟ್ಟಿಯಲ್ಲಿನ ಶೇ 90ರಷ್ಟು ಜನರು ಸ್ಥಳಾಂತರಗೊಂಡಿದ್ದರು. ವಿನಾಶಕಾರಿ ಹಾನಿಗೆ ತುತ್ತಾಗಿರುವ ಗಾಜಾ ಪಟ್ಟಿಗೆ ಮರಳುತ್ತಿರುವ ಜನರು ಇದೀಗ ತಮ್ಮ ಮನೆಯ ಅಸ್ತಿತ್ವದ ಹುಡುಕಾಟ ನಡೆಸಿದ್ದಾರೆ.ಶುಜ್ರವಾರ ಮಾಧ್ಯಮ ಹೇಳಿಕೆ ನೀಡಿರುವ ಇಸ್ರೇಲ್ ಪ್ರಧಾನಿ ನೆತನ್ಯಾಹು, ಮುಂದಿನ ಹಂತಗಳಲ್ಲಿ ಹಮಾಸ್ ನಿಶ್ಯಸ್ತ್ರೀಕರಣ ಮತ್ತು ಗಾಜಾವನ್ನು ಸೇನಾಮುಕ್ತಗೊಳಿಸಲಾಗುವುದು. ಕಠಿಣ ಹಾದಿಯಲ್ಲಿ ಇದನ್ನು ಸಾಧಿಸಲಾಗುವುದು. ಇಸ್ರೇಲಿ ಸೇನೆ ಗಾಜಾದಲ್ಲಿ ಶೇ 50ರಷ್ಟು ರಕ್ಷಣಾತ್ಮಕವಾಗಿ ಕಾರ್ಯ ನಿರ್ವಹಿಸಲಿದೆ ಎಂದಿದ್ದಾರೆ.
