ಉದಯವಾಹಿನಿ, ಬೆಂಗಳೂರು: ಸರ್ಕಾರಕ್ಕೆ ನೈತಿಕತೆ ಇದ್ದರೆ ಪ್ರಿಯಾಂಕ್ ಖರ್ಗೆ ಮೇಲೆ ಕೇಸ್ ದಾಖಲಿಸಲಿ ಎಂದು ಬಿಜೆಪಿ ಶಾಸಕ ಡಾ.ಸಿ.ಎನ್.ಅಶ್ವಥ್ ನಾರಾಯಣ್ ಆಗ್ರಹಿಸಿದ್ದಾರೆ. ಆರ್‌ಎಸ್‌ಎಸ್ ಚಟುವಟಿಕೆ ನಿಷೇಧದ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಪತ್ರ ಬರೆದ ವಿಚಾರವಾಗಿ ಬಿಜೆಪಿ ಕಚೇರಿಯಲ್ಲಿಂದು ಮಾತನಾಡಿದರು. ಇಂತಹ ಘನಂದಾರಿ ಕೆಲಸ ಮಾಡಿರುವ ಪ್ರಿಯಾಂಕ್ ಖರ್ಗೆಯವರನ್ನು ಪತ್ರ ನೀಡಿದ ಕೂಡಲೇ ಸಿಎಂ ಸಿದ್ದರಾಮಯ್ಯ ಅವರು ವಜಾ ಮಾಡಬೇಕಿತ್ತು ಎಂದಿದ್ದಾರೆ.
ಪ್ರಚಾರದ ಗೀಳು:
ಸನ್ಮಾನ್ಯ ಪ್ರಿಯಾಂಕ್ ಖರ್ಗೆ ಯಾವಾಗಲೂ ಅಪ್ರಸ್ತುತ ಹೇಳಿಕೆ ಕೊಟ್ಟು ಸುದ್ದಿಯಲ್ಲಿರುವ ಮಂತ್ರಿ. ಅವರಿಗೆ ಯಾವಾಗಲೂ ಪ್ರಚಾರದಲ್ಲಿರುವ ಗೀಳು. ಅವರು ಏನು ಮಾತಾಡುತ್ತಿದ್ದಾರೆ ಅನ್ನೋದೇ ಅವರಿಗೆ ಗೊತ್ತಿಲ್ಲ. ದುರುದ್ದೇಶದಿಂದ ಸಿಎಂಗೆ ಈ ಪತ್ರವನ್ನು ಬರೆದಿದ್ದಾರೆ. ಈ ವ್ಯಕ್ತಿ ಯಾವಾಗಲೂ ಅಪ್ರಸ್ತುತ ಮಾತು ಹಾಗೂ ಕೆಲಸ ಮಾಡುತ್ತಾರೆ ಎಂದು ಕಿಡಿಕಾರಿದ್ದಾರೆ.
ಮಗ ಎನ್ನುವುದಷ್ಟೇ ಅರ್ಹತೆ:ಇವರಿಗೆ ಮಲ್ಲಿಕಾರ್ಜುನ ಖರ್ಗೆಯವರ ಮಗ ಎನ್ನುವುದಷ್ಟೇ ಅರ್ಹತೆ. ಜ್ಞಾನ ಇಲ್ಲದಿದ್ದರೂ ಕುಳಿತಲ್ಲೇ ಅಧಿಕಾರ ಮಾಡುತ್ತಾರೆ. ಬರೀ ವಂಶಪಾರಂಪರ್ಯವಾಗಿ ಬಂದಿರುವವರಿಗೆ ಯಾವ ಅರ್ಹತೆ ಇದೆ. ನಿಮ್ಮ ಸಾಧನೆ ಹಾಗೂ ಕೆಲಸ ಮಾತಾಡಬೇಕು. ಪ್ರಿಯಾಂಕ್ ಖರ್ಗೆ ಅವರೇ ಸಮಾಜ ಒಡೆಯುವ ಕೆಲಸ ಮಾಡಬೇಡಿ. ಬದಲಾಗಿ ಬಾಂಧವ್ಯ ಮತ್ತು ಗೌರವವನ್ನು ಹೆಚ್ಚಿಸಿ ಎಂದು ಕಿವಿಮಾತು ಹೇಳಿದ್ದಾರೆ.
