ಉದಯವಾಹಿನಿ, ವಿಜಯಪುರ: ಜಿಲ್ಲೆಯ ಕನ್ನೂರು ಗ್ರಾಮದಲ್ಲಿ ಕಲ್ಲಿನಿಂದ ಜಜ್ಜಿ ಇಬ್ಬರು ಯುವಕರನ್ನ ಬರ್ಬರ ಹತ್ಯೆ ಮಾಡಿದ್ದ ಪ್ರಕರಣದ ಪ್ರಮುಖ ಆರೋಪಿಯನ್ನು ವಿಜಯಪುರ ಗ್ರಾಮೀಣ ಪೊಲೀಸರು ಬಂಧಿಸಿದ್ದಾರೆ.ಅಕ್ಷಯ್ ಜುಲಜುಲೆ ಬಂಧಿತ ಆರೋಪಿಯಾಗಿದ್ದು, ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎಂದು ತಿಳಿದುಬಂದಿದೆ.
ವಿಜಯಪುರ ಜಿಲ್ಲೆಯ ಕನ್ನೂರು ಗ್ರಾಮದಲ್ಲಿ ಸಾಗರ ಬೆಳುಂಡಗಿ (25) ಹಾಗೂ ಇಸಾಕ್ ಖುರೇಷಿ (24) ಎಂಬ ಇಬ್ಬರ ಹತ್ಯೆ ನಡೆದಿತ್ತು. ಈ ಸಂಬಂಧ ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆಗಿಳಿದ ಪೊಲೀಸರು 5 ಜನ ಆರೋಪಿಗಳನ್ನ ಸೆರೆಹಿಡಿಯಲು ಕನ್ನೂರು ಗ್ರಾಮದ ಹೊರವಲಯಕ್ಕೆ ತೆರಳಿದ್ದರು. ಈ ವೇಳೆ ಪ್ರಕರಣದ ಪ್ರಮುಖ ಆರೋಪಿ ಪರಾರಿಯಾಗಲು ಯತ್ನಿಸಿದ್ದಾನೆ. ಆಗ ಆತನ ಕಾಲಿಗೆ ಪೊಲೀಸರು ಗುಂಡು ಹಾರಿಸಿ, ಅರೆಸ್ಟ್ ಮಾಡಿದ್ದಾರೆ.
ಇನ್ನೂ 2023ರಲ್ಲಿ ಈರಣ್ಣಗೌಡ ಎಂಬಾತನ ಮೇಲೆ ಈಗ ಮೃತ ಸಾಗರ್ ಹಾಗೂ ಇಸಾಕ್ ಟೈಲ್ಸ್‌ನಿಂದ ಹಲ್ಲೆ ನಡೆಸಿದ್ದರು. ಈರಣ್ಣಗೌಡ 8 ತಿಂಗಳುಗಳ ಕಾಲ ಚಿಕಿತ್ಸೆ ಪಡೆದು ನಂತರ ಮೃತಪಟ್ಟಿದ್ದ. ಇದೇ ದ್ವೇಷದಿಂದಲೇ ಸದ್ಯ ಅಕ್ಷಯ್ ಹಾಗೂ ಈರಣ್ಣಗೌಡ ಮಕ್ಕಳು ಸೇರಿ ಸಾಗರ್, ಇಸಾಕ್‌ನ್ನು ಹತ್ಯೆ ಮಾಡಿದ್ದಾರೆ ಎಂದು ತನಿಖೆ ವೇಳೆ ತಿಳಿದುಬಂದಿದೆ ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ಸ್ಪಷ್ಟಪಡಿಸಿದ್ದಾರೆ.
