ಉದಯವಾಹಿನಿ, ಸೂರತ್: ಅಧಿಕಾರಿಗಳ ಅನುಮತಿಯಿಲ್ಲದೆ ಆವರಣದಲ್ಲಿ ಮಾಂಸಾಹಾರಿ ಪಾರ್ಟಿ ಆಯೋಜಿಸಿದ್ದ ಆರೋಪದ ಮೇಲೆ ಸರ್ಕಾರಿ ಶಾಲೆಯ ಪ್ರಾಂಶುಪಾಲರನ್ನು ಅಮಾನತುಗೊಳಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ. ಗುಜರಾತ್‍ನ ಗೋದಾದರ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಪ್ರಾಂಶುಪಾಲರು ಇಲಾಖಾ ವಿಚಾರಣೆಯನ್ನು ಎದುರಿಸಬೇಕಾಗುತ್ತದೆ ಎಂದು ತಿಳಿದುಬಂದಿದೆ. ಗೋದಾದರ ಪ್ರದೇಶದ ಪ್ರಾಥಮಿಕ ಶಾಲೆ ಸಂಖ್ಯೆ 342ರಲ್ಲಿ ನಡೆದ ಕೂಟದಲ್ಲಿ ಜನರು ಕೋಳಿ ಮತ್ತು ಮಟನ್ ಭಕ್ಷ್ಯಗಳನ್ನು ಸೇವಿಸುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಈ ವಿವಾದ ಹುಟ್ಟಿಕೊಂಡಿದೆ.
ಈ ಕಾರ್ಯಕ್ರಮ ಭಾನುವಾರ ಮಧ್ಯಾಹ್ನ ನಡೆದಿದ್ದು, ಶಾಲೆಯ ಮುಖ್ಯ ದ್ವಾರದಲ್ಲಿ ಬ್ಯಾನರ್‌ನಲ್ಲಿ ಹಾಕಲಾಗಿತ್ತು. ಅದರಲ್ಲಿ 1987 ಮತ್ತು 1991ರ ನಡುವೆ ಶಾಲೆಯಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳ ಪುನರ್ಮಿಲನ ಎಂದು ಬರೆಯಲಾಗಿತ್ತು. ಬಾಡೂಟದ ವಿಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಂತೆ, ತೀವ್ರ ಟೀಕೆಗೆ ಗುರಿಯಾಗಿದೆ. ಶಾಲೆಯ ಮೇಲ್ವಿಚಾರಣೆ ವಹಿಸಿರುವ ಸೂರತ್ ಮುನ್ಸಿಪಲ್ ಕಾರ್ಪೊರೇಷನ್ ನ ಪ್ರಾಥಮಿಕ ಶಿಕ್ಷಣ ಸಮಿತಿ ತನಿಖೆಯನ್ನು ಪ್ರಾರಂಭಿಸಿತು.
