ಉದಯವಾಹಿನಿ, ಕಣ್ಣೂರು: ರೈಲಿನ ಮೇಲೆ ಕಲ್ಲು ತೂರಿದ್ದರಿಂದ ಓರ್ವ ಪ್ರಯಾಣಿಕ ಗಾಯಗೊಂಡ ಘಟನೆ ಕೇರಳದ ಕಣ್ಣೂರಿನಲ್ಲಿ ನಡೆದಿದೆ. ಕಣ್ಣೂರು ದಕ್ಷಿಣ ಮತ್ತು ತಲಶ್ಶೇರಿ ನಿಲ್ದಾಣಗಳ ನಡುವೆ ಯಶವಂತಪುರ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲಿನ ಸೋಮವಾರ ರಾತ್ರಿ ಕಲ್ಲು ತೂರಾಟ ನಡೆದಿದ್ದು, 40 ವರ್ಷದ ವ್ಯಕ್ತಿಯೊಬ್ಬರು ಗಾಯಗೊಂಡಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ರೈಲ್ವೆ ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಕಣ್ಣೂರು ದಕ್ಷಿಣ ನಿಲ್ದಾಣದಿಂದ ಸೋಮವಾರ ರಾತ್ರಿ 10 ಗಂಟೆ ಸುಮಾರಿಗೆ ಹೊರಟ ಯಶವಂತಪುರ ಸಾಪ್ತಾಹಿಕ ಎಕ್ಸ್‌ಪ್ರೆಸ್ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ತೆರೆದ ಕಿಟಕಿಯ ಮೂಲಕ ಎಸ್ 7 ಸ್ಲೀಪರ್ ಕೋಚ್‌ಗೆ ಬಿದ್ದ ಕಲ್ಲುಗಳಲ್ಲಿ ಒಂದು 40 ವರ್ಷದ ಅರುಣ್ ಎಂಬವರ ಕೈಗೆ ತಗುಲಿ ಸಣ್ಣಪುಟ್ಟ ಗಾಯಗಳಾಗಿವೆ. ಅವರ ಕೈಯಲ್ಲಿದ್ದ ಫೋನ್ ಸಂಪೂರ್ಣ ಹಾನಿಗೊಳಗಾಗಿದೆ ಎಂದು ರೈಲ್ವೆ ಪೊಲೀಸರು ಹೇಳಿದರು. ಅರುಣ್ ಅವರ ಹೇಳಿಕೆಯನ್ನು ದಾಖಲಿಸಲಾಗಿದೆ. ಈ ಕುರಿತು ಎಫ್ ಐಆರ್ ದಾಖಲಿಸಿಕೊಂಡಿದ್ದು, ತನಿಖೆಯನ್ನು ಪ್ರಾರಂಭಿಸಲಾಗಿದೆ ಎಂದು ತಿಳಿಸಿದರು.
ರೈಲು ಹಳಿಗಳ ಬಳಿ ಕೆಲವರು ಕುಡಿದು ಕುಳಿತಿರುತ್ತಾರೆ. ಇವರು ರಾತ್ರಿಯಲ್ಲಿ ಹಾದುಹೋಗುವ ರೈಲುಗಳ ಮೇಲೆ ಕಲ್ಲು ತೂರಾಟ ನಡೆಸುತ್ತಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪತ್ನಿಗೆ ಬೆಂಕಿ ಹಚ್ಚಿದ ಪತಿ: ಗೆಳತಿಯನ್ನು ಮದುವೆಯಾಗಲು ಆಕ್ಷೇಪ ವ್ಯಕ್ತಪಡಿಸಿದ ಕಾರಣ ವ್ಯಕ್ತಿಯೊಬ್ಬ ತನ್ನ ಎರಡನೇ ಪತ್ನಿಗೆ ಬೆಂಕಿ ಹಚ್ಚಿರುವ ಆಘಾತಕಾರಿ ಘಟನೆ ಬಿಹಾರದ ನಳಂದ ಜಿಲ್ಲೆಯಲ್ಲಿ ನಡೆದಿದೆ. ಆರೋಪಿ ವಿಕಾಸ್ ಕುಮಾರ್ ಎಂಬಾತ ಐದು ವರ್ಷಗಳ ಹಿಂದೆ ಸುನೀತಾ ದೇವಿ (25) ಎಂಬವರನ್ನು ವಿವಾಹವಾಗಿದ್ದ. ಕೋಪದ ಭರದಲ್ಲಿ ಅವನು ಸುನೀತಾಳಿಗೆ ಪೆಟ್ರೋಲ್ ಸುರಿದು, ಸಿಲಿಂಡರ್‌ನಿಂದ ಎಲ್‌ಪಿಜಿಯನ್ನು ಬಿಡುಗಡೆ ಮಾಡಿ, ಬೆಂಕಿ ಹಚ್ಚಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಸುನೀತಾಳನ್ನು ವಿಕಾಸ್ ಕುಮಾರ್‌ಗೆ ಮದುವೆ ಮಾಡಿದ ಅನಂತರವೇ ಆತನಿಗೆ ಈ ಮೊದಲು ಮದುವೆಯಾಗಿದ್ದ ವಿಚಾರ ತಮಗೆ ತಿಳಿಯಿತು ಎಂದು ಸುನೀತಾಳ ತಂದೆ ತಿಳಿಸಿದ್ದಾರೆ. ಆರೋಪಿಯು ಮೊದಲ ಪತ್ನಿಗೆ ವಿಚ್ಛೇದನ ನೀಡದೆ ಎರಡನೇ ಮದುವೆಯಾಗಿದ್ದಾನೆ. ವಿಚಾರ ಗೊತ್ತಾದ ಬಳಿಕ ಆರೋಪಿ ವಿಕಾಸ್ ಕುಮಾರ್ ಅವರ ಕುಟುಂಬವು ಸುನೀತಾಳನ್ನು ತಮ್ಮೊಂದಿಗೆ ಇರಲು ಮನವೊಲಿಸಿತ್ತು ಎಂದು ಹೇಳಿದರು.
ಸುನೀತಾ ಇಬ್ಬರು ಮಕ್ಕಳಿಗೆ ಜನ್ಮ ನೀಡಿದ್ದು, ಮಕ್ಕಳು ಜನಿಸಿದ ಸ್ವಲ್ಪ ಸಮಯದ ಅನಂತರ ಸಾವನ್ನಪ್ಪಿದ್ದವು. ಇದರ ಬಳಿಕ ಕುಮಾರ್ ತನ್ನ ಗೆಳತಿಯನ್ನು ಮದುವೆಯಾಗುವ ಬಯಕೆಯನ್ನು ವ್ಯಕ್ತಪಡಿಸಲು ಪ್ರಾರಂಭಿಸಿದ್ದಾನೆ. ಇದು ದಂಪತಿ ನಡುವೆ ಆಗಾಗ ಜಗಳಗಳಿಗೆ ಕಾರಣವಾಗಿತ್ತು. ಇದರಿಂದ ಸುನೀತಾ ತನ್ನ ಪತಿಯನ್ನು ತೊರೆದು ತವರು ಮನೆಗೆ ಹೋಗಿದ್ದಳು. ಮತ್ತೆ ಆಕೆಯ ಮನವೊಲಿಸಿ ಕರೆದುಕೊಂಡು ಬಂದ ಆರೋಪಿ ಮನೆಯಲ್ಲಿ ಬೆಂಕಿ ಹಚ್ಚಿದ್ದಾನೆ. ಈ ಸಂಬಂಧ ಸುನೀತಾಳ ಕುಟುಂಬವು ಪೊಲೀಸರಿಗೆ ಕೂಡಲೇ ದೂರು ನೀಡಿದೆ. ಆಕೆಯ ಅತ್ತೆ-ಮಾವ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
