ಉದಯವಾಹಿನಿ, ಮನಿಲಾ: ರಾಜ್ಯದಲ್ಲಿ ಭತ್ತದ ತಳಿಗಳ ಆಧುನಿಕ ಸಂಶೋಧನೆ ಮತ್ತು ಸಂವರ್ಧನೆಗೆ ನೆರವಾಗುವ ಕುರಿತು ಫಿಲಿಪೈನ್ಸ್‌ನ ಅಂತರಾಷ್ಟ್ರೀಯ ಭತ್ತ ಸಂಶೋಧನಾ ಕೇಂದ್ರದೊಂದಿಗೆ ಮಂಡ್ಯ ಕೃಷಿ ವಿಶ್ವವಿದ್ಯಾಲಯ ಮಹತ್ವದ ಒಡಂಬಡಿಕೆ ಮಾಡಿಕೊಂಡಿದೆ.ಫಿಲಿಪೈನ್ಸ್‌ನ ಮನಿಲಾದಲ್ಲಿರುವ ಅಂತರಾಷ್ಟ್ರೀಯ ಭತ್ತ ಸಂಶೋಧನಾ ಕೇಂದ್ರಕ್ಕೆ ಉನ್ನತ ಮಟ್ಟದ ನಿಯೋಗದೊಂದಿಗೆ ತೆರಳಿರುವ ಕೃಷಿ ಸಚಿವರಾದ ಎನ್. ಚಲುವರಾಯಸ್ವಾಮಿ ಅವರು ಒಪ್ಪಂದಕ್ಕೆ ಸಹಿ ಮಾಡಿದರು.
ರಾಜ್ಯದಲ್ಲಿ ನೆರೆ ಹಾವಳಿ, ಬರ ಪರಿಸ್ಥಿತಿಗಳು ಕರಾವಳಿ, ಮಲೆನಾಡು ಬಯಲು ಸೀಮೆ ವಿಭಿನ್ನ ಭೌಗೋಳಿಕ ಪರಿಸರಕ್ಕೆ ಹೊಂದಾಣಿಕೆಯಾಗುವ ವಿವಿಧ ಜೈವಿಕ, ಅಜೈವಿಕ ಒತ್ತಡಗಳಿಗೆ ನಿರೋಧಕತೆ ಜೊತೆಗೆ ಪೌಷ್ಠಿಕಾಂಶ ಉಳ್ಳ, ಅಧಿಕ ಇಳುವರಿ ತರುವ ಬೇಸಾಯ ಕ್ರಮಗಳು ಮತ್ತು ಭತ್ತದ ತಳಿಗಳ ಸಂಶೋಧನೆಗೆ ಈ ಒಡಂಬಡಿಕೆ ನೆರವಾಗಲಿದೆ.
ಇದೇ ಸಂದರ್ಭದಲ್ಲಿ ಕರ್ನಾಟಕದಲ್ಲಿಯೂ ಅಂತರಾಷ್ಟ್ರೀಯ ಮಟ್ಟದ ಭತ್ತ ಸಂಶೋಧನಾ ಕೇಂದ್ರ ಸ್ಥಾಪನೆ ಬಗ್ಗೆಯೂ ಸಚಿವರು ಮಹತ್ವದ ಚರ್ಚೆ ನಡೆಸಿದರು. ಅಲ್ಲದೇ ಭತ್ತದ ಮಹತ್ವ, ಉಭಯ ದೇಶಗಳು ಅನುಸರಿಸುತ್ತಿರುವ ಬೇಸಾಯ ಕ್ರಮಗಳು, ಮೌಲ್ಯ ವರ್ಧನೆಗೆ ಅನುಸರಿಸಬೇಕಾದ ಮಾರ್ಗೋಪಾಯಗಳ ಬಗ್ಗೆ ಮಾಹಿತಿ ಹಾಗೂ ಅನುಭವಗಳನ್ನು ವಿನಿಮಯ ಮಾಡಿಕೊಳ್ಳಲಾಯಿತು. ಭತ್ತದ ತಳಿಗಳ ಸಂರಕ್ಷಣೆ, ಸಂಶೋಧನೆಗೆ ಕರ್ನಾಟಕ ಸರ್ಕಾರ ತೋರುತ್ತಿರುವ ಕಾಳಜಿ ಮತ್ತು ರೈತಪರ ಯೋಜನೆಗಳ ಬಗ್ಗೆ ಫಿಲಿಪೈನ್ಸ್‌ನ ಅಂತರಾಷ್ಟ್ರೀಯ ಭತ್ತ ಸಂಶೋಧನಾ ಕೇಂದ್ರದ ಅಧಿಕಾರಿಗಳು ಮೆಚ್ಚುಗೆ ಸೂಚಿಸಿ ಇದಕ್ಕೆ ಕಾರಣರಾಗಿರುವ ಕೃಷಿ ಸಚಿವರಾದ ಎನ್ ಚಲುವರಾಯಸ್ವಾಮಿ ಅವರಿಗೆ ಅಭಿನಂದನೆ ಸಲ್ಲಿಸಿದರು. 1945ರಿಂದಲೂ ಭಾರತ ಮತ್ತು ಫಿಲಿಪೈನ್ಸ್ ನಡುವೆ ಇರುವ ಬಾಂಧವ್ಯ, ಕೃಷಿ ಕ್ಷೇತ್ರದ ಸಹಕಾರಗಳನ್ನು ಸಹ ಸ್ಮರಿಸಿ ಶ್ಲಾಘಿಸಲಾಯಿತು.

Leave a Reply

Your email address will not be published. Required fields are marked *

error: Content is protected !!