ಉದಯವಾಹಿನಿ, ಇಸ್ಲಾಮಾಬಾದ್: ಕಾಬೂಲ್ ಮೇಲೆ ವಾಯುದಾಳಿ ನಡೆಸಿರುವುದಕ್ಕೆ ಪ್ರತಿಯಾಗಿ ತಾಲಿಬಾನ್‌ ಪಾಕಿಸ್ತಾನದ ಮೇಲಿನ ದಾಳಿಯನ್ನು ಮುಂದುವರಿಸಿದೆ. ಪಾಕಿಸ್ತಾನದ ಒರಾಕ್ ಜೈ ಜಿಲ್ಲೆಯ ಘಿಲ್ಜೊ ಪ್ರದೇಶದ ಬಳಿ ಅಫ್ಘಾನ್ ನ ತಾಲಿಬಾನ್ ಪಡೆಗಳು ಮಹಾಮೂದ್ ಜೈ ಪೋಸ್ಟ್‌ಗೆ ನುಗ್ಗಿ ಭೀಕರ ಸಂಘರ್ಷ ನಡೆಸಿದ್ದು, ಸುಮಾರು ಆರು ಮಂದಿ ಪಾಕಿಸ್ತಾನಿ ಸೈನಿಕರು ಸಾವನ್ನಪ್ಪಿದ್ದಾರೆ. ಈ ದಾಳಿಯ ವೇಳೆ ಚಮನ್-ಸ್ಪಿನ್ ಬೋಲ್ಡಕ್ ಗಡಿಯಲ್ಲಿ ಪಾಕಿಸ್ತಾನದ ಹಲವು ಕೇಂದ್ರ ಸ್ಥಾನಗಳು, ಸಂವಹನ ವ್ಯವಸ್ಥೆಗಳಿಗೆ ಅಪಾರ ಹಾನಿಯಾಗಿವೆ ಎನ್ನಲಾಗಿದೆ.ಒಂದೆಡೆ ಅಫ್ಘಾನ್ ನ ತಾಲಿಬಾನ್ ಪಡೆಗಳು ಪಾಕಿಸ್ತಾನದ ಪಶ್ಚಿಮ ಗಡಿಯಲ್ಲಿ ಸಂಘರ್ಷಕ್ಕೆ ಇಳಿದಿದ್ದರೆ ಇನ್ನೊಂದೆಡೆ ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನ ಉಗ್ರಗಾಮಿಗಳ ದಾಳಿಗಳು ಹೆಚ್ಚಾಗಿದ್ದು, ಇದರಿಂದ ಪಾಕಿಸ್ತಾನದ ಭದ್ರತಾ ಪಡೆಗಳ ಮೇಲೆ ಹೆಚ್ಚಿನ ಒತ್ತಡ ಉಂಟಾಗಿದೆ.ಬಲೂಚಿಸ್ತಾನದ ಚಮನ್ ಮತ್ತು ಅಫ್ಘಾನಿಸ್ತಾನದ ಕಂದಹಾರ್ ಪ್ರಾಂತ್ಯದ ನಡುವಿನ ಪ್ರಮುಖ ಕ್ರಾಸಿಂಗ್ ಪಾಯಿಂಟ್ ಆಗಿರುವ ಫ್ರೆಂಡ್‌ಶಿಪ್ ಗೇಟ್ ಬಳಿ ನಿರಂತರ ಶೆಲ್ ದಾಳಿಯಿಂದ ಅಪಾರ ಹಾನಿಯಾಗಿವೆ. ಈ ವೇಳೆ ತನ್ನ ಮನೆಗೆ ಗುಂಡಿನ ದಾಳಿಯಾಗಿವೆ ಎಂದು ಪಾಕಿಸ್ತಾನದ ಯುವತಿಯೊಬ್ಬಳು ಹೇಳಿಕೊಂಡಿದ್ದಾಳೆ. ಇದು ಇಲ್ಲಿ ಜನಜೀವನ ಅಪಾಯದಲ್ಲಿದೆ ಎಂಬುದನ್ನು ತೋರಿಸಿದೆ.ಪಾಕಿಸ್ತಾನದ ಸೈನಿಕರು ಬುಡಕಟ್ಟು ಪ್ರದೇಶಗಳಲ್ಲಿ ಗೆರಿಲ್ಲಾ ಶೈಲಿಯ ಟಿಟಿಪಿ ದಾಳಿಗಳು, ಗಡಿಯುದ್ದಕ್ಕೂ ಅಫ್ಘಾನ್ ತಾಲಿಬಾನ್ ದಾಳಿಗಳಿಂದ ತೀವ್ರ ಒತ್ತಡವನ್ನು ಅನುಭವಿಸುತ್ತಿದೆ. ಅಲ್ಲದೇ ಎರಡು ಕಡೆಗಳಲ್ಲೂ ಅಪಾರ ಸಾವುನೋವುಗಳು ಉಂಟಾಗುತ್ತಿವೆ ಎನ್ನಲಾಗಿದೆ. ಖೈಬರ್ ಪಖ್ತುನ್ ಖ್ವದಲ್ಲಿ ಟಿಟಿಪಿ ದಾಳಿಗಳನ್ನು ತೀವ್ರಗೊಳಿಸಿದೆ. ಇನ್ನೊಂದೆಡೆ ಅಫ್ಘಾನ್ ತಾಲಿಬಾನ್ ಘಟಕಗಳು ಪಾಕಿಸ್ತಾನಿ ಚೆಕ್‌ಪೋಸ್ಟ್‌ಗಳನ್ನು ಗುರಿಯಾಗಿಸಿಕೊಂಡಿದ್ದು, ಹಲವಾರು ಪಾಕಿಸ್ತಾನಿ ಪ್ರದೇಶಗಳನ್ನು ತನ್ನ ವಶಕ್ಕೆ ಪಡೆದಿದೆ.ಈ ಕುರಿತು ಪ್ರತಿಕ್ರಿಯಿಸಿರುವ ಪಾಕಿಸ್ತಾನದ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್, ತಾಲಿಬಾನ್ ಕಾರ್ಯಾಚರಣೆಗಳ ಪ್ರಮಾಣ ಮತ್ತು ಸಮಯವನ್ನು ನಿಖರವಾಗಿ ಗುರುತಿಸುವಲ್ಲಿ ವಿಫಲವಾಗಿರುವುದಾಗಿ ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!