ಉದಯವಾಹಿನಿ, ರಾಜ್‌ಕೋಟ್‌: ದೇವದತ್‌ ಪಡಿಕ್ಕಲ್‌, ಕರುಣ್‌ ನಾಯರ್‌ ಹಾಗೂ ಆರ್‌ ಸ್ಮರಣ್‌ ಅವರ ಅರ್ಧಶತಕಗಳ ಬಲದಿಂದ ಕರ್ನಾಟಕ ತಂಡ ಸೌರಾಷ್ಟ್ರ ವಿರುದ್ಧದ 2025-26ರ ಸಾಲಿನ ರಣಜಿ ಟ್ರೋಫಿ _ ಎಲೈಟ್‌ ಬಿ ಗುಂಪಿನ ಪಂದ್ಯದಲ್ಲಿ ಉತ್ತಮ ಆರಂಭವನ್ನು ಪಡದಿದೆ. ಮೊದಲನೇ ದಿನದಾಟದ ಅಂತ್ಯಕ್ಕೆ ಕರ್ನಾಟಕ ತಂಡ ಪ್ರಥಮ ಇನಿಂಗ್ಸ್‌ನಲ್ಲಿ 90 ಓವರ್‌ಗಳಿಗೆ 5 ವಿಕೆಟ್‌ಗಳ ನಷ್ಟಕ್ಕೆ 295 ರನ್‌ಗಳನ್ನು ಕಲೆ ಹಾಕಿದೆ.ನಿರಂಜನ್‌ ಶಾ ಮೈದಾನದಲ್ಲಿ ಬುಧವಾರ ಆರಂಭವಾದ ರಣಜಿ ಟ್ರೋಫಿ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಆಯ್ದುಕೊಂಡ ಕರ್ನಾಟಕ ತಂಡದ ಪರ ಇನಿಂಗ್ಸ್‌ ಆರಂಭಿಸಿದ ನಿಕಿನ್‌ ಜೋಸ್‌ (12) ಹಾಗೂ ನಾಯಕ ಮಯಾಂಕ್‌ ಅಗರ್ವಾಲ್‌ (2) ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದರು. ಈ ಇಬ್ಬರೂ ಓಪನಿಂಗ್‌ ಬ್ಯಾಟ್ಸ್‌ಮನ್‌ಗಳನ್ನು ಧರ್ಮೇಂದ್ರ ಸಿನ್ಹ್‌ ಜಡೇಜಾ ಔಟ್‌ ಮಾಡಿದರು. ಆ ಮೂಲಕ ಕರ್ನಾಟಕ 26 ರನ್‌ಗಳಿಗೆ ಎರಡು ವಿಕೆಟ್‌ ಕಳೆದುಕೊಂಡು ಆರಂಭಿಕ ಆಘಾತ ಅನುಭವಿಸಿತ್ತು.
ಕರುಣ್‌-ಪಡಿಕ್ಕಲ್‌ ಜುಗಲ್‌ಬಂದಿ
ಮೂರನೇ ವಿಕೆಟ್‌ಗೆ ಜೊತೆಯಾದ ದೇವದತ್‌ ಪಡಿಕ್ಕಲ್‌ ಹಾಗೂ ಕರುಣ್‌ ನಾಯರ್‌ ಅತ್ಯುತ್ತಮ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿದರು. ಈ ಇಬ್ಬರೂ ಸೌರಾಷ್ಟ್ರ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದರು. ಆ ಮೂಲಕ 146 ರನ್‌ಗಳ ದೊಡ್ಡ ಜೊತೆಯಾಟವನ್ನು ಆಡಿ ಆರಂಭಿಕ ಆಘಾತಕ್ಕೆ ಒಳಗಾಗಿದ್ದ ತಂಡವನ್ನು ಮೇಲೆತ್ತಿದರು.

ತವರು ತಂಡಕ್ಕೆ ಕರುಣ್‌ ಭರ್ಜರಿ ಕಮ್‌ಬ್ಯಾಕ್‌
ವಿದರ್ಭ ತಂಡದಿಂದ ತವರು ತಂಡಕ್ಕೆ ಮರಳಿದ ಕರುಣ್‌ ನಾಯರ್‌, ತಮ್ಮ ಕಮ್‌ಬ್ಯಾಕ್‌ ಪಂದ್ಯದಲ್ಲಿಯೇ ಮಿಂಚಿದರು. ಅವರು ಆಡಿದ 126 ಎಸೆತಗಳಲ್ಲಿ 9 ಬೌಂಡರಿಗಳೊಂದಿಗೆ 73 ರನ್‌ ಗಳಿಸಿದರು. ಆ ಮೂಲಕ ಶತಕ ಸಿಡಿಸುವ ಹಾದಿಯಲ್ಲಿ ಕರುಣ್‌ ನಾಯರ್‌ ಅವರನ್ನು ಧರ್ಮೇಂದ್ರ ಸಿನ್ಹ ಜಡೇಜಾ ಔಟ್‌ ಮಾಡಿದರು.

Leave a Reply

Your email address will not be published. Required fields are marked *

error: Content is protected !!