ಉದಯವಾಹಿನಿ, ಇತ್ತೀಚೆಗಷ್ಟೇ ಸರಿಗಮಪ ಖ್ಯಾತಿಯ ಗಾಯಕಿ ಸುಹಾನಾ ಸಯ್ಯದ್ ತಾವು ಪ್ರೀತಿಸುತ್ತಿರುವ ಹುಡುಗನ ಪರಿಚಯ ಮಾಡಿಕೊಟ್ಟಿದ್ದರು. 16 ವರ್ಷಗಳಿಂದ ಪ್ರೀತಿಸುತ್ತಿರುವ ನಿತಿನ್ ಹೆಸರಿನ ರಂಗಭೂಮಿ ಕಲಾವಿದನ ಜೊತೆ ಸುಹಾನಾ ಮದುವೆಯಾಗುತ್ತಿದ್ದು ಮದುವೆಯಲ್ಲಿ ವಿಶ್ವಮಾನವತ್ವದ ಧೋರಣೆ ಮೆರೆಯಲು ಹೊರಟಿದ್ದಾರೆ. ಕುವೆಂಪು ಅವರ ಮಂತ್ರ ಮಾಂಗಲ್ಯದ ಆಶಯದಂತೆ ಸುಹಾನಾ ಹಾಗೂ ನಿತಿನ್ ಸತಿಪತಿಯಾಗಲು ಹೊರಟಿದ್ದಾರೆ. ಶುಕ್ರವಾರ ಬೆಂಗಳೂರು ಹೊರವಲಯ ಕನಕಪುರ ರಸ್ತೆಯ ಖಾಸಗಿ ರೆಸಾರ್ಟ್ನಲ್ಲಿ ಮಂತ್ರ ಮಾಂಗಲ್ಯ ವಿವಾಹ ಜರುಗಲಿದೆ. ವಧು ಮತ್ತು ವರನ ಕಡೆಯ ಹತ್ತಿರದ ಬಂಧುಗಳು ಹಾಗೂ ಕೆಲವೇ ಕೆಲವು ಆಪ್ತರಿಗಷ್ಟೇ ಆಹ್ವಾನ ನೀಡಲಾಗಿದೆ.
ಹಿಜಬ್ ಧರಿಸಿ ಹಿಂದೂ ಭಜನೆ ಹಾಡುವ ಸುಹಾನಾಗೆ ತೀವ್ರ ವಿರೋಧ ವ್ಯಕ್ತವಾಗಿತ್ತು, ಆದರೀಗ ಎಲ್ಲಾ ಅಡೆತಡೆಗಳನ್ನ ದಾಟಿ ತಾವು ಬಹುವರ್ಷಗಳಿಂದ ಪ್ರೀತಿಸುತ್ತಿರುವ ಅಂತರ್ ಧರ್ಮದ ಹುಡುಗನ ಜೊತೆ ಮದುವೆಯಾಗಲು ಹೊರಟಿದ್ದಾರೆ.
