
ಉದಯವಾಹಿನಿ, ನವದೆಹಲಿ: ಯೆಮೆನ್ ನಲ್ಲಿ ಕೊಲೆ ಆರೋಪದಡಿ ಭಾರತೀಯ ನರ್ಸ್ ನಿಮಿಷಾ ಪ್ರಿಯಾ ಅವರಿಗೆ ವಿಧಿಸಿಲಾಗಿದ್ದ ಮರಣದಂಡನೆ ಶಿಕ್ಷೆಯನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ ಮತ್ತು ಈ ವಿಷಯದಲ್ಲಿ ಯಾವುದೇ ವ್ಯತಿರಿಕ್ತ ಬೆಳವಣಿಗೆ ನಡೆದಿಲ್ಲ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಮಾಹಿತಿ ನೀಡಿದೆ.
ಕೇಂದ್ರ ಸರ್ಕಾರದ ಪರವಾಗಿ ನ್ಯಾಯಾಲಯದಲ್ಲಿ ಹಾಜರಾಗಿದ್ದ ಅಟಾರ್ನಿ ಜನರಲ್ ಆರ್. ವೆಂಕಟರಮಣಿ “ಈ ಪ್ರಕರಣದಲ್ಲಿ ಮಾತುಕತೆ ನಡೆಸಲು ಹೊಸ ಮಧ್ಯವರ್ತಿಯೊಬ್ಬರನ್ನು ನೇಮಿಸಲಾಗಿದೆ” ಎಂದು ನ್ಯಾಯಮೂರ್ತಿ ವಿಕ್ರಂನಾಥ್ ಮತ್ತು ಸಂದೀಪ್ ಮೇಹ್ತಾ ಅವರನ್ನೊಳಗೊಂಡ ನ್ಯಾಯಪೀಠಕ್ಕೆ ತಿಳಿಸಿದ್ದಾರೆ.38 ವರ್ಷದ ಕೇರಳ ಮೂಲದ ನರ್ಸ್ ನಿಮಿಷಾ ಪ್ರಿಯಾ ಅವರನ್ನು ರಕ್ಷಿಸಲು ರಾಜತಾಂತ್ರಿಕ ಮಾರ್ಗಗಳನ್ನು ಬಳಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಬೇಕೆಂದು ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆಯ ವೇಳೆ ಈ ಮಾಹಿತಿ ನೀಡಲಾಗಿದೆ.ಈ ವೇಳೆ ನ್ಯಾಯಾಲಯ ನಿಮಿಷಾ ಮರಣದಂಡನೆ ವಿಷಯದ ಸ್ಥಿತಿಗತಿಯನ್ನು ಪ್ರಶ್ನಿಸಿದಾಗ, “ಸದ್ಯಕ್ಕೆ ಮರಣದಂಡನೆಯನ್ನು ತಡೆಹಿಡಿಯಲಾಗಿದೆ” ಎಂದು ಸೇವ್ ನಿಮಿಷಾ ಪ್ರಿಯಾ ಇಂಟರ್ ನ್ಯಾಷನಲ್ ಕೌನ್ಸಿಲ್ ಪರ ವಕೀಲರು ತಿಳಿಸಿದರು.
