ಉದಯವಾಹಿನಿ, ನವದೆಹಲಿ : ಡೊನಾಲ್ಡ್ ಟ್ರಂಪ್ ಕುರಿತು ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೀಡಿದ್ದ ಹೇಳಿಕೆಗಳ ವಿರುದ್ಧ ಅಮೆರಿಕದ ಗಾಯಕಿ ಮೇರಿ ಮಿಲ್ಬೆನ್ ಇಂದು ವಾಗ್ದಾಳಿ ನಡೆಸಿದ್ದಾರೆ. “ನಿಮ್ಮ ಐ ಹೇಟ್ ಇಂಡಿಯಾ ಪ್ರವಾಸಕ್ಕೆ ಹಿಂತಿರುಗಿ” ಎಂದು ಆಕೆ ರಾಹುಲ್ ಗಾಂಧಿಗೆ ಸೂಚಿಸಿ ಟ್ರೋಲ್ ಮಾಡಿದ್ದಾರೆ. ಪ್ರಧಾನಿ ಮೋದಿಯನ್ನು ಆಗಾಗ ಹೊಗಳುವ ಗಾಯಕಿ ಮೇರಿ ಮಿಲ್ಬೆನ್ ಈ ಬಾರಿಯೂ ಮೋದಿಯನ್ನು ಸಮರ್ಥನೆ ಮಾಡಿಕೊಂಡಿದ್ದಾರೆ.
ನಿನ್ನೆ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದ ರಾಹುಲ್ ಗಾಂಧಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಬಗ್ಗೆ ಪ್ರಧಾನಿ ಮೋದಿ ಭಯಗೊಂಡಿದ್ದಾರೆ. ಪ್ರಧಾನಿ ಮೋದಿ ಟ್ರಂಪ್‌ಗೆ ಹೆದರುತ್ತಾರೆ. ಭಾರತ ರಷ್ಯಾದ ತೈಲವನ್ನು ಖರೀದಿಸುವುದಿಲ್ಲ ಎಂದು ಟ್ರಂಪ್ ನಿರ್ಧರಿಸಲು ಮತ್ತು ಘೋಷಿಸಲು ಮೋದಿ ಏಕೆ ಅವಕಾಶ ಮಾಡಿ ಕೊಡುತ್ತಾರೆ? ಪದೇ ಪದೇ ಭಾರತವನ್ನು ನಿಂದಿಸುತ್ತಿದ್ದರೂ ಟ್ರಂಪ್ ಅವರೊಂದಿಗೆ ಮೋದಿ ಮಾತನಾಡಿ ಅಭಿನಂದನೆ ಹೇಳುತ್ತಿರುತ್ತಾರೆ. ನಮ್ಮ ದೇಶದ ಹಣಕಾಸು ಸಚಿವರ ಅಮೆರಿಕ ಭೇಟಿಯನ್ನು ರದ್ದುಗೊಳಿಸಲಾಗಿದೆ. ಶರ್ಮ್ ಎಲ್-ಶೇಖ್ ಶೃಂಗಸಭೆಗೆ ಮೋದಿ ಹೋಗಲಿಲ್ಲ. ಇದರ ಅರ್ಥವೇನು? ಎಂದು ಪ್ರಶ್ನಿಸಿದ್ದರು. ಇದರ ಬೆನ್ನಲ್ಲೇ ಮೋದಿಯನ್ನು ಸಮರ್ಥಿಸಿಕೊಂಡಿರುವ ಅಮೆರಿಕನ್ ಗಾಯಕಿ ಮೇರಿ, “ನೀವು ಹೇಳಿರುವುದು ತಪ್ಪು ರಾಹುಲ್ ಗಾಂಧಿಯವರೇ. ಪ್ರಧಾನಿ ನರೇಂದ್ರ ಮೋದಿ ಅವರು ನಮ್ಮ ದೇಶದ ಅಧ್ಯಕ್ಷ ಟ್ರಂಪ್‌ಗೆ ಹೆದರುವುದಿಲ್ಲ. ಪ್ರಧಾನಿ ಮೋದಿ ದೀರ್ಘ ಆಟವನ್ನು ಅರ್ಥಮಾಡಿಕೊಂಡಿದ್ದಾರೆ. ಇದು ಅಮೆರಿಕದೊಂದಿಗಿನ ಅವರ ರಾಜತಾಂತ್ರಿಕತೆಯ ಕಾರ್ಯತಂತ್ರವಾಗಿದೆ. ನಮ್ಮ ಸರ್ಕಾರ ಯಾವಾಗಲೂ ಅಮೆರಿಕದ ಹಿತಾಸಕ್ತಿಗಳಿಗೆ ಆದ್ಯತೆ ನೀಡುವಂತೆಯೇ, ಪ್ರಧಾನಿ ಮೋದಿಯೂ ಭಾರತಕ್ಕೆ ಉತ್ತಮವಾದದ್ದನ್ನು ಮಾಡುತ್ತಾರೆ. ನಾನು ಅದನ್ನು ಶ್ಲಾಘಿಸುತ್ತೇನೆ, ” ಎಂದು ಹೇಳಿದ್ದಾರೆ.
