ಉದಯವಾಹಿನಿ, ಅಂಟಾನನರಿವೊ: ಮಡಗಾಸ್ಕರ್‌ನ ನೂತನ ಅಧ್ಯಕ್ಷರಾಗಿ ಕರ್ನಲ್ ಮೈಕಲ್ ರ್ಯಾಂಡ್ರಿಯನ್‌ರಿನಾ ಪ್ರಮಾಣ ವಚನ ಸ್ವೀಕರಿಸಿದರು. ಕೆಲವೇ ದಿನಗಳ ಹಿಂದೆ ಯುವಜನತೆ ಪ್ರತಿಭಟನೆಗಳಿಂದ ಮಡಗಾಸ್ಕರ್ ಸರ್ಕಾರ ಪತನಗೊಂಡು, ಹಿಂದಿನ ಅಧ್ಯಕ್ಷ ಆಂಡ್ರಿಯ್ ರಜೋಲಿನಾ ಪಲಾಯನ ಮಾಡಿದ್ದರು. ಮಡಗಾಸ್ಕರ್‌ನ ಹೈ ಕಾನ್‌ಸ್ಟಿಟ್ಯೂಷನಲ್ ಕೋರ್ಟ್‌ನಲ್ಲಿ ಈ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆದಿದ್ದು, ಎಲ್ಲೆಡೆ ಹಬ್ಬದ ವಾತಾವರಣ ನಿರ್ಮಾಣವಾಗಿದೆ.
ಈ ವೇಳೆ ಮಾತನಾಡಿದ ಸೇನಾ ಘಟಕ ಕಮಾಂಡರ್ ಆಗಿರುವ ನೂತನ ಅಧ್ಯಕ್ಷ ರ್ಯಾಂಡ್ರಿಯನ್‌ರಿನಾ, ರಾಷ್ಟ್ರೀಯ ಏಕತೆ ಮತ್ತು ಮಾನವ ಹಕ್ಕುಗಳನ್ನು ರಕ್ಷಿಸುವುದಾಗಿ ಶಪಥ ಮಾಡಿದರು. “ಸೇನೆಯ ನಿಯಂತ್ರಣದಲ್ಲಿ ತಾತ್ಕಾಲಿಕ ಸರ್ಕಾರ ಸ್ಥಾಪನೆಯಾಗಲಿದ್ದು, ಎರಡು ವರ್ಷಗಳವರೆಗೆ ಅಧಿಕಾರದಲ್ಲಿ ಇರಲಿದೆ. ಈ ಅವಧಿಯ ನಂತರ ಹೊಸ ಚುನಾವಣೆ ನಡೆಸಲಾಗುವುದು” ಅವರು ಘೋಷಿಸಿದ್ದಾರೆ.
ರಜೋಲಿನಾ ಅವರನ್ನು ಅಧಿಕಾರಕ್ಕೆ ತಂದ 2009ರ ದಂಗೆಯಲ್ಲಿ ರ್ಯಾಂಡ್ರಿಯನ್‌ರಿನಾ ಭಾಗಿಯಾಗಿರಲಿಲ್ಲ. ಆದರೆ ಈ ಸಲದ ಬಂಡಾಯದ ವೇಳೆ ಅವರು ಸೈನಿಕರಿಗೆ “ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸಬೇಡಿ” ಎಂದು ಕರೆ ನೀಡಿ, ಅವರಿಗೆ ರಕ್ಷಣೆ ನೀಡುವುದಾಗಿ ಭರವಸೆ ನೀಡಿದ್ದರು.
ಇನ್ನೂ ವಿದೇಶಕ್ಕೆ ಪಲಾಯನಗೊಂಡಿರುವ ಮಾಜಿ ಅಧ್ಯಕ್ಷರಾದ ಆಂಡ್ರಿಯ್ ರಜೋಲಿನಾ, ಈ ಅಧಿಕಾರ ವಶಪಡಿಸಿಕೊಳ್ಳುವಿಕೆಯನ್ನು ತೀವ್ರವಾಗಿ ಖಂಡಿಸಿದ್ದಾರೆ ಮತ್ತು ಅಧಿಕೃತವಾಗಿ ರಾಜೀನಾಮೆ ನೀಡುವುದಿಲ್ಲ ಎಂದು ತಿಳಿಸಿದ್ದಾರೆ.
