ಉದಯವಾಹಿನಿ, ದೋಹಾ: ಉತ್ತರ ವಜಿರಿಸ್ತಾನ್‌ ಸೇನಾ ಶಿಬಿರದ ಮೇಲೆ ಶುಕ್ರವಾರ ನಡೆದ ‘ಸಂಯೋಜಿತ ಆತ್ಮಾಹುತಿ ದಾಳಿಯಲ್ಲಿ’ ಪಾಕಿಸ್ತಾನದ 7 ಸೈನಿಕರ ಮೃತಪಟ್ಟು, ಇನ್ನೂ 13 ಮಂದಿ ಗಾಯಗೊಂಡಿದ್ದಾರೆ ಎಂದು ಪಾಕ್‌ನ ರಕ್ಷಣಾ ಸಚಿವಾಲಯ ತಿಳಸಿದೆ. ದೋಹಾ(Doha)ದಲ್ಲಿ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ನಡುವೆ ಶಾಂತಿ ಮಾತುಕತೆ ಆರಂಭಕ್ಕೂ ಕೆಲವೇ ಗಂಟೆಗಳ ಮುನ್ನ ಈ ದಾಳಿ ನಡೆದಿದೆ.
ಅಧಿಕಾರಿಗಳ ಪ್ರಕಾರ, ಮಿರ್ ಅಲಿ ಪ್ರದೇಶದಲ್ಲಿನ ಸೇನಾ ಶಿಬಿರದ ಗೋಡೆಗೆ ಸ್ಫೋಟಕಗಳಿಂದ ತುಂಬಿದ ವಾಹನವನ್ನು ಉಗ್ರ ಡಿಕ್ಕಿಪಡಿಸಿದ್ದಾನೆ. ಈ ಬಳಿಕ ಶಿಬಿರಕ್ಕೆ ಪ್ರವೇಶಿಸಲು ಯತ್ನಿಸಿದ ಇನ್ನಿಬ್ಬರು ಉಗ್ರರರನ್ನು ಭದ್ರತಾ ಪಡೆಗಳು ಹೊಡೆದುರುಳಿಸಿವೆ. ತಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ್ ಈ ದಾಳಿಯ ಹೊಣೆ ಹೊತ್ತಿದ್ದು, ಖಾಲಿದ್ ಬಿನ್ ವಲೀದ್ ಆತ್ಮಹತ್ಯಾ ಘಟಕ ಮತ್ತು ತೆಹ್ರೀಕ್ ತಾಲಿಬಾನ್ ಗುಲ್ಬಹಾದಾರ್ ಈ ದಾಳಿಗಳನ್ನು ನಡೆಸಿದ್ದಾರೆ ಎಂದು ಹೇಳಿದೆ.
ಉಗ್ರರು ನಿರಂತರ ಗುಂಡಿನ ದಾಳಿ ನಡೆಸುತ್ತಿದ್ದ ಹಿನ್ನೆಲೆ ಪಾಕ್ ಸೇನೆ ಯುದ್ಧ ಹೆಲಿಕಾಪ್ಟರ್‌ಗಳನ್ನು ಬಳಸಿತು ಎಂದು ಸ್ಥಳೀಯ ಮೂಲಗಳು ತಿಳಿಸಿವೆ. ಉತ್ತರ ವಜಿರಿಸ್ತಾನ್‌ನಲ್ಲಿ ಇತ್ತೀಚೆಗೆ ನಡೆದ ಅತ್ಯಂತ ಗಂಭೀರ ಉಗ್ರ ದಾಳಿಗಳಲ್ಲಿ ಇದೂ ಒಂದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನೂ.. ಬಜೌರ್ ಜಿಲ್ಲೆಯ ಮಮೂಂದ್ ಟಂಗಿ ಶಾ ಪ್ರದೇಶದಲ್ಲಿ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ, ಸ್ಫೋಟಕ ತುಂಬಿದ ವಾಹನವು ಸ್ಫೋಟಗೊಂಡಿದೆ. ಘಟನೆಯಲ್ಲಿ ಯಾವುದೇ ಜೀವಹಾನಿ ಸಂಭವಿಸಿಲ್ಲ ಎಂದು ಮೂಲಗಳು ತಿಳಿಸಿವೆ. ಭದ್ರತಾ ಪಡೆಗಳು ಸ್ಥಳವನ್ನು ಸುತ್ತುವರಿದಿದ್ದು, ಉಗ್ರ ಚಟುವಟಿಕೆಯ ಸಂಪರ್ಕದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!