ಉದಯವಾಹಿನಿ, ದೆಹಲಿ: ಸಂಸತ್‌ ಸಮೀಪವಿರುವ ಸಂಸದರ ವಸತಿ ಗೃಹದಲ್ಲಿ ಬೆಂಕಿ ಕಾಣಿಸಿಕೊಂಡಿದೆ ಸದ್ಯ ಬೆಂಕಿ ನಂದಿಸಲು ಕಾರ್ಯಾಚರಣೆ ನಡೆಸಲಾಗುತ್ತಿದೆ. ದೆಹಲಿಯ ಬಿ.ಡಿ. ಮಾರ್ಗದಲ್ಲಿರುವ ಬಹುಮಹಡಿ ಕಟ್ಟಡ ಬ್ರಹ್ಮಪುತ್ರ ಅಪಾರ್ಟ್‌ಮೆಂಟ್‌ನಲ್ಲಿ ಶನಿವಾರ (ಅ. 18) ಭಾರಿ ಬೆಂಕಿ ಅವಘಡ ಸಂಭವಿಸಿದೆ. 2020ರಲ್ಲಿ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ ಈ ಕಟ್ಟಡದಲ್ಲಿ ಹಲವು ಲೋಕಸಭಾ ಮತ್ತು ರಾಜ್ಯಸಭಾ ಸಂಸದರು ವಾಸಿಸುತ್ತಿದ್ದಾರೆ. ಬೆಂಕಿಗೆ ಕಾರಣ ಇನ್ನೂ ತಿಳಿದುಬಂದಿಲ್ಲ.
ಸಂಕೀರ್ಣದ ಮೇಲಿನ ಮಹಡಿಗಳಲ್ಲಿ ಒಂದರಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ನಿವಾಸಿಗಳಲ್ಲಿ ಭೀತಿಯ ವಾತಾವರಣ ಮೂಡಿದೆ. ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಹಲವು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿವೆ. ಸಂಸತ್ತಿನಿಂದ ಕೇವಲ 200 ಮೀಟರ್ ದೂರದಲ್ಲಿರುವ ಬ್ರಹ್ಮಪುತ್ರ ಅಪಾರ್ಟ್‌ಮೆಂಟ್‌ ಸಂಸತ್ ಸದಸ್ಯರಿಗೆ ಹಂಚಿಕೆಯಾದ ಅಧಿಕೃತ ನಿವಾಸಗಳಲ್ಲಿ ಒಂದು. ಸದ್ಯ ಸ್ಥಳಕ್ಕೆ 6 ಅಗ್ನಿ ಶಾಮಕ ದಳದ ವಾಹನ ಧಾವಿಸಿವೆ. ಹಿರಿಯ ಅಧಿಕಾರಿಗಳು ಸ್ಥಳದಲ್ಲಿದ್ದಾರೆ. ʼʼಬೆಂಕಿ ಅವಘಡಕ್ಕೆ ಕಾರಣ ತಿಳಿದು ಬಂದಿಲ್ಲ. ಯಾರಿಗೂ ಗಾಯವಾಗಿಲ್ಲʼʼ ಎಂದು ವಿವರಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!