ಉದಯವಾಹಿನಿ, ಅಯೋಧ್ಯೆ: ದೇಶದೆಲ್ಲೆಡೆ ದೀಪಾವಳಿ ಸಂಭ್ರಮ ಮನೆ ಮಾಡಿದ್ದು, ಇನ್ನೆರೆಡು ದಿನಗಳಲ್ಲಿ ಬೆಳಕಿನ ಹಬ್ಬ ದೀಪಾವಳಿಯ ಬೆಳಕು ನಾಡಿನೆಲ್ಲೆಡೆ ಚೆಲ್ಲಲಿದೆ. ಬೆಳಕು ಜ್ಞಾನದ ಸಂಕೇತ, ನವೋಲ್ಲಾಸದ ಪ್ರತೀಕ, ಅಜ್ಞಾನದ ಕತ್ತಲಿನಿಂದ ಸುಜ್ಞಾನವೆಂಬ ಬೆಳಕಿನ ಕಡೆಗೆ ಸಾಗುವ ಮಾರ್ಗಕ್ಕೆ ದಾರಿ ದೀಪ ಈ ದೀಪಾವಳಿ. ಎಲ್ಲಾರ ಬಾಳಲಿ ಸನ್ಮಂಗಳವನ್ನು ತರುವ ಬೆಳಕಿನ ಹಬ್ಬಕ್ಕೆ ಎಲ್ಲಡೆ ಈಗಾಗಲೇ ಸಿದ್ಧತೆ ಶುರುವಾಗಿದ್ದು, ರಾಮನೂರು ಅಯೋಧ್ಯೆಯಲ್ಲಿಯೂ ಬೆಳಕಿನ ಹಬ್ಬಕ್ಕೆ ಬಿರುಸಿನ ತಯಾರಿ ನಡೆಯುತ್ತಿದೆ.
ಹೌದು ಕಳೆದ ವರ್ಷ ಉದ್ಘಾಟನೆಗೊಂಡ ರಾಮ ಜನ್ಮಭೂಮಿ ಅಯೋಧ್ಯೆ ರಾಮಮಂದಿರಲ್ಲಿ ಬೆಳಕಿನ ಹಬ್ಬದ ಸಂಭ್ರಮ ಮನೆ ಮಾಡಿದ್ದು, ಅಕ್ಟೋಬರ್ 19 ರಂದು ಸರಿ ಸುಮಾರು 26.11ಲಕ್ಷ ಮಣ್ಣಿನ ಹಣತೆಗಳಿಂದ ದೀಪ ಬೆಳಗಿಸುವ ಮೂಲಕ ಮತ್ತೊಂದು ವಿಶ್ವ ದಾಖಲೆ ಬರೆಯಲು ಯೋಗಿ ಸರ್ಕಾರ ಸಜ್ಜಾಗಿದೆ. ಅಲ್ಲದೇ ಅಕ್ಟೋಬರ್ 19 ರಂದು 2,100 ಭಕ್ತರಿಂದ ನಡೆಸಲ್ಪಡುವ ಭವ್ಯ ಮಹಾ ಆರತಿಯು ನಡೆಯಲಿದ್ದು, ಈ ಬಾರಿಯ ದೀಪಾವಳಿ ಹಬ್ಬಕ್ಕೆ ಅಯೋಧ್ಯೆಯಲ್ಲಿ ಹೆಚ್ಚಿನ ಜನರು ಸೇರುವ ಸಾಧ್ಯೆತೆ ಇದೆ ಹೇಳಲಾಗುತ್ತಿದೆ. ಡಾ. ರಾಮ್ ಮನೋಹರ್ ಲೋಹಿಯಾ ಅವಧ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಸ್ಥಳೀಯ ಸಂಸ್ಥೆಗಳ ಸೇರಿದಂತೆ ಸುಮಾರು 33,000 ಸ್ವಯಂಸೇವಕರು ಬೆಳಕಿನ ಹಬ್ಬವನ್ನು ಚಂದಗಾಣಿಸಲು ಕೈ ಜೋಡಿಸಿದ್ದು, ರಾಮ್ ಕಿ ಪೈಡಿ ಘಾಟ್ ಸೇರಿದಂತೆ ಒಟ್ಟು ಇಲ್ಲಿನ 56 ಘಾಟ್‌ಗಳಲ್ಲಿ ದೀಪಗಳನ್ನು ಜೋಡಿಸುವ ಕಾರ್ಯ ನಡೆಯುತ್ತಿದೆ. ಈಗಾಗಲೇ ಪ್ರಮುಖ ಘಾಟ್ ಗಳಾದ 8, 9, 10 ಮತ್ತು 11 ಪ್ರದೇಶಗಳಲ್ಲಿ ಸುಮಾರು 7 ರಿಂದ 8 ಲಕ್ಷ ದೀಪಗಳನ್ನು ಇಟ್ಟಾಗಿದ್ದು, ಅಯೋಧ್ಯೆಯಲ್ಲಿ ನಡೆದ ಮೊದಲ ದೀಪಾವಳಿ ದೀಪೋತ್ಸವ ಗಿನ್ನೆಸ್ ದಾಖಲೆಯನ್ನು ಮೀರಿ, ಹೊಸ ಗಿನ್ನೆಸ್ ವಿಶ್ವ ದಾಖಲೆ ಬರೆಯಲು ಸಿದ್ದವಾಗಿದೆ.
