ಉದಯವಾಹಿನಿ , ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರಿನ ಶಕ್ತಿ ದೇವತೆ ದೇವೀರಮ್ಮನ ಜಾತ್ರೆಯ ಸಲುವಾಗಿ ಸಾವಿರಾರು ಭಕ್ತರು ಬೆಟ್ಟ ಹತ್ತಲು ಕಾತುರರಾಗಿದ್ದಾರೆ. ಆದರೆ, ಮುಳ್ಳಯ್ಯನಗಿರಿ ತಪ್ಪಲಿನಲ್ಲಿ ಆರಂಭವಾದ ಧಾರಾಕಾರ ಮಳೆ ಬೆಟ್ಟ ಹತ್ತುವ ಭಕ್ತರಿಗೆ ಸವಾಲಾಗಿ ಪರಿಣಮಿಸಿದೆ. ದೇವಿರಮ್ಮನನ್ನು ಕಣ್ತುಂಬಿಕೊಳ್ಳಲು ಮಳೆಯ ನಡುವೆಯೇ ಭಕ್ತರು ಬೆಟ್ಟವನ್ನು ಹತ್ತಲು ಅನಿವಾರ್ಯತೆ ಎದುರಾಗಿದೆ.
ಸಮುದ್ರ ಮಟ್ಟದಿಂದ ಬರೋಬ್ಬರಿ 3,800 ಅಡಿಗೂ ಹೆಚ್ಚು ಎತ್ತರದಲ್ಲಿರುವ ದೇವೀರಮ್ಮನ ದೇಗುಲಕ್ಕೆ ತೆರಳಲು ಭಕ್ತರು ಸುಮಾರು 5-6 ಕಿ.ಮೀ. ದೂರದ ಪಿರಮಿಡ್ ಆಕಾರದ ಕಡಿದಾದ ಬೆಟ್ಟವನ್ನು ಹತ್ತಬೇಕು. ಈ ಬಾರಿ ಜಿಲ್ಲಾಡಳಿತ ಮತ್ತು ದೇವಸ್ಥಾನ ಸಮಿತಿ ಭಾನುವಾರ (ಅ.19) ಮತ್ತು ಸೋಮವಾರ (ಅ.20) ಎರಡು ದಿನ ಬೆಟ್ಟ ಹತ್ತಲು ಅವಕಾಶ ನೀಡಿದೆ. ಈ ಎರಡು ದಿನಗಳಲ್ಲಿ 60 ರಿಂದ 70 ಸಾವಿರಕ್ಕೂ ಹೆಚ್ಚು ಭಕ್ತರು ಬೆಟ್ಟ ಹತ್ತುವ ನಿರೀಕ್ಷೆಯಿದೆ. ಆದರೆ, ಭಾನುವಾರ-ಸೋಮವಾರ ಎರಡು ದಿನಗಳಲ್ಲಿ ಜಿಲ್ಲೆಯಲ್ಲಿ 10 ರಿಂದ 30 ಮಿ.ಮೀ. ಮಳೆ ಬೀಳುವ ಸಾಧ್ಯತೆಯಿದೆ ಎಂದು ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.
ಧಾರಾಕಾರ ಮಳೆ ಆರಂಭವಾಗಿದೆ. ಮಳೆಯ ಪ್ರಮಾಣ ಹೆಚ್ಚಾದರೆ, ಗುಡ್ಡವು ಜಾರುವ ಸಾಧ್ಯತೆ ಇರುವುದರಿಂದ, ಭಕ್ತರು ಅತ್ಯಂತ ಎಚ್ಚರಿಕೆಯಿಂದ ಬೆಟ್ಟ ಹತ್ತಬೇಕಾಗಿದೆ. ಯಾವುದೇ ತೊಂದರೆಗಳು ಆಗದಂತೆ ಮುನ್ನೆಚ್ಚರಿಕೆವಹಿಸಿರುವ ಜಿಲ್ಲಾಡಳಿತ, ಬೆಟ್ಟ ಹತ್ತುವ ಭಕ್ತರಿಗಾಗಿ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.
