ಉದಯವಾಹಿನಿ , ಹಾಸನ: ಹಾಸನಾಂಬ ದೇವಿ ದರ್ಶನಕ್ಕೆ ನಿರೀಕ್ಷೆಗೂ ಮೀರಿ ಭಕ್ತರು ಆಗಮಿಸುತ್ತಿದ್ದು, ಭಕ್ತರನ್ನು ನಿಯಂತ್ರಿಸಲು ಕ್ರಮ ವಹಿಸುವಂತೆ ಡಿಸಿ ಲತಾ ಕುಮಾರಿಯವರಿಗೆ ಹಾಸನ ಎಸ್‍ಪಿ ಮೊಹಮ್ಮದ್ ಸುಜೀತಾ ಪತ್ರ ಬರೆದು ಮನವಿ ಮಾಡಿದ್ದಾರೆ. ರಾಜ್ಯ, ಹೊರರಾಜ್ಯಗಳಿಂದ ಭಕ್ತರು ಹಾಸನಾಂಬೆ ದರ್ಶನಕ್ಕೆ ಬರುತ್ತಿದ್ದಾರೆ. ರಸ್ತೆವರೆಗೂ ಭಕ್ತರ ಸರತಿ ಸಾಲು ಬಂದು ತಲುಪಿದೆ. ದರ್ಶನಕ್ಕೆ ವ್ಯವಸ್ಥೆ ಮಾಡಿರುವ ಸ್ಥಳಾವಕಾಶ ಕಡಿಮೆ ಇದೆ. ದೀಪಾವಳಿ ಹಬ್ಬದ ರಜೆ ಹಿನ್ನೆಲೆ ಭಕ್ತರ ಸಂಖ್ಯೆ ಹೆಚ್ಚಾಗುವ ನಿರೀಕ್ಷೆ ಇದೆ. ಹೆಚ್ಚಿನ ಸಂಖ್ಯೆಯ ಭಕ್ತರು ಬಂದು ನೂಕುನುಗ್ಗಲು ಉಂಟಾಗಿ ಅಹಿತಕರ ಘಟನೆ ಸಂಭವಿಸಬಹುದು. ಭಕ್ತರನ್ನು ನಿಯಂತ್ರಿಸಲು ಕ್ರಮ ವಹಿಸದೇ ಇದ್ದಲ್ಲಿ ಅಹಿತಕರ ಘಟನೆ ಸಂಭವಿಸಿದರೆ ಪೊಲೀಸ್ ಇಲಾಖೆ ಜವಾಬ್ದಾರಿಯಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಇಂದು ಮಧ್ಯಾಹ್ನ 2 ಗಂಟೆಯಿಂದ ಮಧ್ಯಾಹ್ನ 3:30 ರವರೆಗೆ ನೈವೇದ್ಯಕ್ಕಾಗಿ ದೇವಾಲಯದ ಗರ್ಭಗುಡಿ ಬಾಗಿಲು ಮುಚ್ಚಲಿದೆ. ಮಧ್ಯಾಹ್ನ 3:30 ರಿಂದ ನಾಳೆ (ಅ.20) ಮುಂಜಾನೆ 3 ಗಂಟೆಯವರೆಗೆ ನಿರಂತರ ದರ್ಶನ ಇರಲಿದೆ. ಮುಂಜಾನೆ 3 ರಿಂದ 5 ಗಂಟೆಯವರೆಗೆ ನೈವೇದ್ಯಕ್ಕಾಗಿ ಗರ್ಭಗುಡಿ ಬಾಗಿಲು ಮುಚ್ಚಲಿದೆ. ಬೆಳಿಗ್ಗೆ 5 ಗಂಟೆಯಿಂದ ಹಾಸನಾಂಬ ದೇವಿ ದರ್ಶನ ಪುನಃ ಆರಂಭವಾಗಲಿದೆ.
