ಉದಯವಾಹಿನಿ, ಟೈಟಲ್ ಹಾಗೂ ಕಂಟೆಂಟ್ ಮೂಲಕ ಕುತೂಹಲ ಹೆಚ್ಚಿಸಿರುವ ಲವ್ ಯು ಮುದ್ದು ಸಿನಿಮಾದಿಂದ ಮತ್ತೊಂದು ಹಾಡು ರಿಲೀಸ್ ಆಗಿದೆ. ಈಗಾಗಲೇ ಬಿಡುಗಡೆಯಾಗಿದ್ದ ಟೈಟಲ್ ಟ್ರ್ಯಾಕ್‌ಗೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿದ್ದು, ಇದೀಗ ಚಿತ್ರತಂಡ ಬರುತಿದೆ ಅಳುವು ಎಂಬ ಗೀತೆಯನ್ನು ಅನಾವರಣ ಮಾಡಿದೆ. ಲವ್ ಯು ಮುದ್ದು ಸಿನಿಮಾದ ಫ್ಯಾಥೋ ಸಾಂಗ್ ರಿಲೀಸ್ ಆಗಿದೆ.
ತನ್ನ ಪ್ರೇಯಸಿ ದೂರವಾದ ಯುವಕನ ಪಾಡು-ಒದ್ದಾಟ ಹೇಗೆ ಇರಲಿದೆ ಎಂಬ ಕುರಿತಾದ ಹಾಡು ಇದಾಗಿದೆ. ಬರುತಿದೆ ಅಳುವು ಎಂಬ ಗೀತೆಗೆ ನಿರ್ದೇಶಕ ಕುಮಾರ್ ಸಾಹಿತ್ಯ ಬರೆದಿದ್ದಾರೆ. ಜಸ್ಕರಣ್ ಸಿಂಗ್ ಧ್ವನಿಯಾಗಿದ್ದಾರೆ. ಆರವ್ ರಿಷಿಕ್ ಸಂಗೀತ ಒದಗಿಸಿದ್ದಾರೆ. ಬರುತಿದೆ ಅಳುವು ಎನ್ನುತ್ತಾ ನಾಯಕ ಸಿದ್ದು ಹಾಡಿನಲ್ಲಿ ನಟಿಸಿದ್ದಾರೆ.
ಕೆಮಿಸ್ಟ್ರಿ ಆಫ್ ಕರಿಯಪ್ಪ’ ಸಿನಿಮಾ ಖ್ಯಾತಿಯ ಕುಮಾರ್ ಈ ಬಾರಿ ನೈಜ ಪ್ರೇಮಕಥೆಯನ್ನ ಹೇಳೋದಿಕ್ಕೆ ಹೊರಟಿದ್ದಾರೆ. ಮಹಾರಾಷ್ಟ್ರದಲ್ಲಿ ನಡೆದ ಪ್ರೇಮಕಥೆಯೊಂದನ್ನ ಆಧರಿಸಿ ಲವ್ ಯು ಮುದ್ದು ಸಿನಿಮಾ ಮಾಡಲಾಗಿದೆ. ಕಿರುತೆರೆಯಲ್ಲಿ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದ ಮತ್ತು ಅಜ್ಞಾತವಾಸಿ ಸಿನಿಮಾದಲ್ಲಿ ನಟಿಸಿದ್ದ ಸಿದ್ದು ಈ ಸಿನಿಮಾಕ್ಕೆ ನಾಯಕ. ಯುವನಟಿ ರೇಷ್ಮಾ ನಾಯಕಿ. ಈ ಸಿನಿಮಾದಲ್ಲಿ ರಾಜೇಶ್ ನಟರಂಗ, ತಬಲಾ ನಾಣಿ, ಗಿರೀಶ್ ಶಿವಣ್ಣ, ಶ್ರೀವತ್ಸ ಮತ್ತು ಸ್ವಾತಿ ನಟಿಸಿದ್ದಾರೆ.
