ಉದಯವಾಹಿನಿ, ಲಖನೌ: ಉತ್ತರ ಪ್ರದೇಶದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದ್ದು, ತನ್ನ ಸಹೋದರಿಯನ್ನು ಮದುವೆಯಾಗಲು ನಿರಾಕರಿಸಿದ ಪತಿಯ ಸಹೋದರನ ಖಾಸಗಿ ಅಂಗವನ್ನೇ ಮಹಿಳೆಯೊಬ್ಬಳು ಕತ್ತರಿಸಿದ್ದಾಳೆ. ಆಗ್ರಾದ ಬರ್ಹಾನ್‌ನಲ್ಲಿ ಈ ಘಟನೆ ನಡೆದಿದೆ ಗಂಭೀರ ಗಾಯಗೊಂಡಿರುವ ಯುವಕ ಯೋಗೇಶ್‌ನನ್ನು ಆರಂಭದಲ್ಲಿ ಆಗ್ರಾದ ಎಸ್‌.ಎಸ್‌. ಮೆಡಿಕಲ್‌ ಕಾಲೇಜಿಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ನೀಡಿ ಇದೀಗ ದಿಲ್ಲಿಯ ಏಮ್ಸ್‌ಗೆ ದಾಖಲಿಸಲಾಗಿದೆ. ಈಗಲೂ ಆತನ ಸ್ಥಿತಿ ಚಿಂತಾಜನಕವಾಗಿ ಮುಂದುವರಿದಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಉತ್ತರಾಖಂಡ ಹಲ್‌ದ್ವಾನಿಯಲ್ಲಿ ಎಂಜಿನಿಯರ್‌ ಆಗಿರುವ ಯೋಗೇಶ್‌ ದೀಪಾವಳಿ ರಜೆಯ ಹಿನ್ನೆಲೆಯಲ್ಲಿ ಬರ್ಹಾನ್‌ನ ಖೇಡಿ ಅದು ಗ್ರಾಮದಲ್ಲಿರುವ ತನ್ನ ಮನೆಗೆ ಬಂದಿದ್ದ ವೇಳೆ ಈ ಘಟನೆ ನಡೆದಿದೆ. ಆರೋಪಿಯನ್ನು ಯೋಗೇಶ್‌ನ ಸಹೋದರ ರಾಜ್‌ ಬಹದ್ದೂರ್‌ ಪತ್ನಿ ಅರ್ಚನಾ ಎಂದು ಗುರುತಿಸಲಾಗಿದೆ.

ಅರ್ಚನಾ ತನ್ನ ಸಹೋದರಿಯನ್ನು ಯೋಗೇಶ್‌ನೊಂದಿಗೆ ಮದುವೆ ಮಾಡಿಸಬೇಕು ಎಂದುಕೊಂಡಿದ್ದಳು. ಆದರೆ ಇತ್ತೀಚೆಗೆ ಯೋಗೇಶ್‌ನ ವಿವಾಹ ಬೇರೊಬ್ಬ ಯುವತಿಯೊಂದಿಗೆ ನಿಶ್ಚಯವಾಗಿತ್ತು. ನವೆಂಬರ್‌ನಲ್ಲಿ ಮದುವೆಯ ದಿನಾಂಕವೂ ನಿಗದಿಯಾಗಿತ್ತು. ಇದರಿಂದ ಅಸಮಾಧಾನಗೊಂಡ ಅರ್ಚನಾ ಈ ಕೃತ್ಯ ಎಸಗಿದ್ದಾಳೆ. ಸೋಮವಾರ (ಅಕ್ಟೋಬರ್‌ 20) ರಾತ್ರಿ ದೀಪಾವಳಿ ಪೂಜೆ ಮುಗಿದ ಬಳಿಕ ಮಾತನಾಡಲು ಯೋಗೇಶ್‌ನನ್ನು ತನ್ನ ರೂಮ್‌ಗೆ ಕರೆದು ಹರಿತವಾದ ಚಾಕುವಿನಿಂದ ದಾಳಿ ನಡೆಸಿದ್ದಾಳೆʼʼ ಎಂದು ಮನೆಯವರು ತಿಳಿಸಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದು ನೋವಿನಿಂದ ನರಳಾಡುತ್ತಿದ್ದ ಯೋಗೇಶ್‌ನನ್ನು ಗಮನಿಸಿದ ಮನೆಯವರು ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಿದರು. ಈ ವೇಳೆಗಾಗಲೇ ಸಾಕಷ್ಟು ರಕ್ತಸ್ರಾವವಾಗಿತ್ತು. ಅದಾದ ಬಳಿಕ ರಾಜ್‌ ಬಹದ್ದೂರ್‌ ತನ್ನ ಪತ್ನಿ ಅರ್ಚನಾ ಮತ್ತು ಮೂವರು ಮಕ್ಕಳನ್ನು ಆಕೆಯ ತವರಿಗೆ ಕಳುಹಿಸಿದ್ದಾನೆ. ಸದ್ಯ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!