ಉದಯವಾಹಿನಿ, ನವದೆಹಲಿ: ದೀಪಾವಳಿ ಹಬ್ಬವನ್ನು ಬಹಳ ಸಂಭ್ರಮದಿಂದ ಆಚರಿಸಲಾಗುತ್ತಿದೆ. ದೀಪಗಳನ್ನು ಹಚ್ಚಿ, ಪಟಾಕಿಗಳನ್ನು ಸಿಡಿಸಿ ಹಬ್ಬದ ಸಂತೋಷವನ್ನು ಇಮ್ಮಡಿಗೊಳಿಸಲಾಗುತ್ತಿದೆ. ಬೆರಗುಗೊಳಿಸುವ ಅಲಂಕಾರಗಳಿಂದ ಹಿಡಿದು ಬಗೆ-ಬಗೆಯ ಖಾದ್ಯಗಳನ್ನು ತಯಾರಿಸುವವರೆಗೆ, ಬೆಳಕಿನ ಹಬ್ಬವನ್ನು ಸಂತೋಷದಿಂದ ಆಚರಿಸಲಾಗುತ್ತಿದೆ. ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವಿಡಿಯೊವೊಂದು ನೆಟ್ಟಿಗರ ಮನಗೆದ್ದಿದೆ. ಯುವಕನೊಬ್ಬ ಡೆಲಿವರಿ ಬಾಯ್‍ಗಳಿಗೆ ಸಿಹಿತಿಂಡಿಗಳನ್ನು ಉಡುಗೊರೆಯಾಗಿ ನೀಡಿದ್ದಾನೆ.

ಗುಂಡೇಟಿ ಮಹೇಂದರ್ ರೆಡ್ಡಿ ಎಂಬ ಬಳಕೆದಾರರು ಪೋಸ್ಟ್ ಮಾಡಿದ ಇನ್‌ಸ್ಟಾಗ್ರಾಮ್ ವಿಡಿಯೊ ಅನೇಕರ ಹೃದಯಗಳನ್ನು ಗೆದ್ದಿದೆ. ವಿಡಿಯೊದಲ್ಲಿ, ಸ್ವಿಗ್ಗಿ, ಬ್ಲಿಂಕಿಟ್, ಜೆಪ್ಟೊ ಮತ್ತು ಬಿಗ್‌ಬಾಸ್ಕೆಟ್‌ನಂತಹ ಜನಪ್ರಿಯ ಅಪ್ಲಿಕೇಶನ್‍ನಿಂದ ಸಿಹಿತಿಂಡಿಗಳನ್ನು ರೆಡ್ಡಿ ಆರ್ಡರ್ ಮಾಡಿದ್ದಾರೆ. ನಂತರ ತಾನು ತರಿಸಿದ ಆರ್ಡರ್‌ಗಳನ್ನು ದೀಪಾವಳಿ ಹಬ್ಬದ ಪ್ರಯುಕ್ತ ಡೆಲಿವರಿ ಬಾಯ್‍ಗಳಿಗೆ ಉಡುಗೊರೆಯಾಗಿ ನೀಡುವ ಮೂಲಕ ಅಚ್ಚರಿಗೊಳಿಸಿದ್ದಾರೆ. ʼʼಈ ದೀಪಾವಳಿಯಲ್ಲಿ, ಡೆಲಿವರಿ ಬಾಯ್‍ಗಳ ಮೊಗದಲ್ಲಿ ನಗು ತರುವುದಕ್ಕಾಗಿ ಈ ರೀತಿ ಮಾಡಲು ನಿರ್ಧರಿಸಿದ್ದೆ. ಬೇರೆ ಬೇರೆ ಅಪ್ಲಿಕೇಶನ್‌ಗಳಿಂದ ಸಿಹಿತಿಂಡಿಗಳನ್ನು ಆರ್ಡರ್ ಮಾಡಿದೆವು. ಪ್ರತಿದಿನ ಸಂತೋಷವನ್ನು ನೀಡುವ ಡೆಲಿವರಿ ಬಾಯ್‌ಗಳಿಗೆ ಅವುಗಳನ್ನು ಉಡುಗೊರೆಯಾಗಿ ನೀಡಿದೆವು. ಸ್ವಿಗ್ಗಿ, ಬ್ಲಿಂಕಿಟ್, ಜೆಪ್ಟೊ ಮತ್ತು ಬಿಗ್‌ಬಾಸ್ಕೆಟ್‌ನಿಂದ ದೀಪಾವಳಿಗೆ ಸಿಹಿತಿಂಡಿಗಳನ್ನು ಆರ್ಡರ್ ಮಾಡಿದ್ದೇವೆ. ಅವುಗಳನ್ನು ತಂದ ಡೆಲಿವರಿ ಬಾಯ್‍ಗಳಿಗೆ ಅದನ್ನು ನೀಡಿದ್ದೇವೆʼʼ ಎಂದು ಕ್ಯಾಪ್ಶನ್‌ನಲ್ಲಿ ಬರೆಯಲಾಗಿದೆ.

Leave a Reply

Your email address will not be published. Required fields are marked *

error: Content is protected !!